Wednesday 25 December 2013

ಅಟಲ್ ಬಿಹಾರಿ ವಾಜಪೇಯಿ

     ಅಟಲ್ ಬಿಹಾರಿ ವಾಜಪೇಯಿ (ಜನನ ಡಿಸೆಂಬರ್ 25, 1924)ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ, ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ. ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿಯವರು.
    ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್. ಎಸ್. ಎಸ್ )ವನ್ನು ಸೇರಿದರು.
    ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. 1996ರಲ್ಲಿ ಮತ್ತು ಇನ್ನೊಮ್ಮೆ 1998 ರಿಂದ 2004ರವರೆಗೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1984 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು.
    ಇವರು ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. 1977ರಲ್ಲಿ ಜನತಾ ಪಾರ್ಟಿ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌ಎಸ್‌ಎಸ್‌ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ಹಾಗೂ 1986ರಿಂದ 1993 ಮತ್ತು 1996ರಲ್ಲಿ ಕಾರ್ಯನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು.
    ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.