Tuesday, 15 July 2014

ಮುಳುಗೋಯ್ತು ನಮ್ಮ ಊರು


ಜೋರಾಗಿ ಮಳೆ ಬಂದು ನೀರಲ್ಲಿ ಮುಳುಗೋಯ್ತು ನಮ್ಮ ಊರು
ಸೂರಿಲ್ಲದ ನಮ್ಮ ನೋವನ್ನು ಕೇಳೋರೆ ಇಲ್ಲ ಇಲ್ಲಿ ಯಾರು
ಪರಿಹಾರ ಕಾರ್ಯ ಎಂದು ಹೇಳಿ ಬರುವರು
ನಡುನೀರಲ್ಲಿ ಕೈ ಬಿಟ್ಟು ಮಾಯವಾಗುವರು

ನೀರಲ್ಲೇ ಮುಳುಗಿ ಕಾಯುತಿಹೆವು ಭರವಸೆಯ ಬೆಳಕನ್ನು
ದೇವರೇ ಕೈ ಬಿಟ್ಟಿರುವಾಗ ನಂಬೋದು ಯಾರನ್ನು
ಕನಸಿನಲ್ಲೂ ನಮಗೀಗ ಆತ್ಮವಿಶ್ವಾಸ ಉಳಿದಿಲ್ಲ
ಸರ್ಕಾರದ ಆಶ್ವಾಸನೆ ನಂಬೋಕೆ ಆಗೋಲ್ಲ

ಎಲ್ಲಾ ಕೊಚ್ಚಿ ಹೋದ ಮೇಲೆ ಬರುವ ಜನನಾಯಕರು
ಇವರಿಗೆ ಮತನೀಡಿ ಗೆಲ್ಲಿಸಿದ ನಾವು ದೊಡ್ಡ ಮೂರ್ಖರು
ರಾತ್ರೀಲಿ ಮಲಗೋಕೆ ಸಣ್ಣ ಜಾಗವು ನಮಗಿಲ್ಲ
ಹಣವನ್ನು ನುಂಗುವ ಅವರಿಗೆ ನಮ್ಮ ಕಷ್ಟ ತಿಳಿಯೊಲ್ಲ

ಮಾಡುವರು ಇದರಲ್ಲೂ ರಾಜಕೀಯದ ಕಸರತ್ತು
ಮೂರನ್ನು ಬಿಟ್ಟ ಇವರಿಗೆ ಬರುವುದಿಲ್ಲ ನಿಯತ್ತು
ಅಮಾಯಕರ ಹೊಟ್ಟೆ ಹೊಡೆದು ಬದುಕುತಿಹರು ಹಾಯಾಗಿ
ಇವರನ್ನು ನಂಬಿದ ನಮ್ಮ ಬದುಕು ಹೋಗಿದೆ ಕೊನೆಯಾಗಿ

Thursday, 10 July 2014

ಬೆಂಗಳೂರು

Bang Bang ಬೆಂಗಳೂರು
ಕೆಂಪೇಗೌಡ ಕಟ್ಟಿದ ಬೆಂದಕಾಳೂರು

ಪುಷ್ಪಗಳಿಂದ ಕಂಗೊಳಿಸುವ ಉದ್ಯಾನ ನಗರಿ
ಊರಿನ ತುಂಬೆಲ್ಲಾ ಹಸಿರುಸಿರಿನ ಸಿರಿ
ಇದುವೆ ನಮ್ಮ ನೆಚ್ಚಿನ ಮಹಾನಗರ
ಬನ್ನಿ ಎಲ್ಲಾ ಹಾಡೋಣ ಪ್ರೀತಿಯ ಸ್ವರ

ಒಂದು ಊರೆಂದ ಮೇಲೆ ಅಲ್ಲಿ ಸಾವಿರಾರು ತೊಂದರೆ
ಎಲ್ಲಾನು ಚೆಂದಾನೋ ಅನುಸರಿಸಿಕೊಂಡು ಹೋದರೆ

ಶುಭದಿನವ ಹೇಳುವ ಬಾನ ನೇಸರ
ದಿನನಿತ್ಯ ಬರುವುದಿಲ್ಲಿ ಜನಸಾಗರ
ನೂರಾರು ಆಸೆ ಹೊತ್ತು ಬರುವ ಜನರು
ಕೆಟ್ಟವರ ಕೈಗೆ ಸಿಕ್ಕಿ ನಲುಗುತಿಹರು

ಈ ಭೂಮೀಲಿ ಹುಟ್ಟಿದ ಮೇಲೆ ಮುಂದೆ ಸಾಯೋದು ನಿಶ್ಚಿತ
ಕಷ್ಟವನ್ನು ಧೈರ್ಯವಾಗಿ ಹೆದುರಿಸುವವನೆ ಬದುಕಲು ಯೋಗ್ಯವಂತ

ತಂತ್ರಜ್ಞಾನದಲಿ ಇವ ಪರಮವೀರ
ಅದಕೆಂದೆ ಕರೆಯುವರೋ ಸಿಲಿಕಾನ್ ನಗರ
ಇಲ್ಲಿನ ಜನ - ಜೀವನ ವೈವಿಧ್ಯಮಯ
ಶಾಂತಿ - ಪ್ರೀತಿ - ಸ್ನೇಹವೇ ನಮ್ಮ ಧ್ಯೇಯ

ಜಾತಿ - ನೀತಿ - ಭಾಷೆ - ರೀತಿ ಯಾವುದಾದರೇನು
ನಾವೆಲ್ಲಾ ಇರುವುದು ಭುವನೇಶ್ವರಿಯ ಮಡಿಲಲ್ಲಿಯೇ ಅಲ್ಲವೇನು

ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನೆನೆಯುತಿರು ಇದ ನೀ ಎಲ್ಲಾ ಸಮಯ
ಎಲ್ಲಾದರೂ ಇರು ನೀ ಎಂತಾದರು ಇರು
ಮರೆಯಬೇಡ ಎಂದಿಗೂ ಈ ಬೆಂಗಳೂರು

ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ತಾಯಿ - ತಾಯ್ನಾಡನ್ನು ಗೌರವಿಸಿದರೆ ನೀನಾಗುವೆ ಯಶಸ್ವಿ.

Monday, 7 July 2014

ಕಣ್ನೋಟ



ಮುಂಜಾನೆ ಮಂಜಿನ ಹೊತ್ತಲ್ಲಿ
ಮೈ ನಡುಗಿಸುವ ತಣ್ಣನೆ ಚಳಿಯಲಿ
ಕಂಡೆ ನಾ ಆ ಭವ್ಯ ಸುಂದರಿಯ
ಹೇಳಲಾರೆ ನನ್ನ ಸೆಳೆದ ಅವಳ ಪರಿಯ

ಕವಿಗಳ ವರ್ಣನೆಗೆ ನಿಲುಕದ ಕಾವ್ಯವೋ
ಕುಂಚದ ಬಣ್ಣನೆಗೆ ಸಿಲುಕದ ಚಿತ್ರವೋ
ಶಿಲ್ಪಿಯ ಕಲ್ಪನೆಯ ಮೀರಿದ ಶಿಲ್ಪವೋ
ನನಗಾಗಿ ಭೂಮಿಗೆ ಬಂದ ಇಂದ್ರನ ಮಗಳೋ

ಏನೆಂದು ಹಾಡಲಿ ಅವಳ ಚೆಲುವಾ
ನೋಡಿ ಸೋತಿತು ನನ್ನೀ ಮನವು
ಕದ್ದಳು ನನ್ನ ಹೃದಯವ ಕೋಲ್ಮಿಂಚಿನ ಕಣ್ನೋಟದಲಿ
ಮುಗಿಲೆತ್ತರಕೆ ಹಾರುತ್ತಿದ್ದವು ಆಸೆಗಳು ನನ್ನ ಮನದಲಿ

ಉಸಿರಲಿ ಉಸಿರಾಗಿ ಹೋದಳು ಮೊದಲ ನೋಟದಲೆ
ನನ್ನ ಸಂಪೂರ್ಣವಾಗಿ ತೋಯ್ದಿತ್ತು ಪ್ರೀತಿಯ ಅಲೆ
ಕೊರೆವ ಚಳಿಯಲಿ ಸುಡು ಬಿಸಿಲ ಹಾಗೆ ಬಂದಳವಳು
ತೆರೆವಳೇ ನನ್ನ ಜೀವನದಲ್ಲಿ ಭಾಗ್ಯದ ಬಾಗಿಲು

ಇವಳಿಗಾಗಿ ಬರೆದೆ ಓಲೆ ಮನಸಿನ ಪುಟದಲಿ
ಅವಳ ಅಂದವೇ ತುಂಬಿತ್ತು ಎಲ್ಲಾ ಪದದಲಿ
ಅವಳೊಂದು ಬಂಗಾರದ ಮಾಯಾಜಿಂಕೆ
ಮರುಭೂಮಿಯಲಿ ಕಂಡ ಮರೀಚಿಕೆ

ನನ್ನ ಹೃದಯಕೆ ಅವಳ ದನಿ ಕೇಳುವ ಬಯಕೆ
ತುಟಿಬಿಚ್ಚಿ ಮಾತನಾಡುವ ಮುನ್ನವೇ ಮಾಯವಾದಳಾಕೆ 
ಹರ್ಷ...

Friday, 4 July 2014

ಏಳು - ಬೀಳು


ರಾಗ - ತಾಳವಿಲ್ಲದೆ ಸಾಹಿತ್ಯ ಇರೋಕೆ ಸಾಧ್ಯಾನಾ?
ಉಪ್ಪು - ಖಾರ ಇಲ್ಲದ ಅಡಿಗೆ ತಿನ್ನೋಕೆ ಕಷ್ಟಾನೆ!
ಏಳು - ಬೀಳು, ಸೋಲು - ಗೆಲುವು ಇದ್ದರೆ ಜೀವನ
ಭೂಮಿ ಮೇಲೆ ನಮಗಿರುವುದು ಸಾವೊಂದೆ ಕೊನೆ...!

ಇದು ಮೂರು ದಿನದ ಬಾಳು, ಎಂದಿಗೂ ನೀ ನಗುತಿರು
ನಿನಗಾಗುವ ಅನುಭವವೆ ನಿನ್ನ ನಿಜವಾದ ಗುರು
ಬದುಕೊದು ಕಲಿಸೋಕೆ ಇಲ್ಲಿ ನಮಗ್ಯಾರು ಇಲ್ಲ
ಈ ಬಾಳಿನ ರಹಸ್ಯಾನ ದೇವನೊಬ್ಬನೆ ಬಲ್ಲ

ಸೋಲೇ ಗೆಲುವಿನ ಮೆಟ್ಟಿಲು ಇದ ನೀ ಮರೆಯದಿರು
ಗೆಲುವು ಬಂದಾಗ ನೀ ಕಣ್ಮುಚ್ಚಿ ಕೂರದಿರು
ಸಾಧನೆಗೆ ಬೇಕು ಆತ್ಮವಿಶ್ವಾಸದ ಬಲ
ಸನ್ಮಾರ್ಗದೆಡೆಗೆ ಇರಲಿ ನಿನ್ನೆಲ್ಲಾ ಹಂಬಲ

ಕಷ್ಟದಲ್ಲಿ ಬೆಯುತಿರುವ ಜನರ ದನಿಯಾಗು ನೀ
ಕಿತ್ತು ತಿನ್ನೋ ರಾಕ್ಷಸರಿಗೆ ಯಮಪಾಶವಾಗು ನೀ
ದುಡಿವುದೇ ಜೀವನ, ನಿಜ ಸುಖವು ಅಲ್ಲಿದೆ
ಹೆಣ್ಣು - ಹೊನ್ನು - ಮಣ್ಣಿನಲ್ಲೇ ನಾಶ ಅಡಗಿದೆ

ನಮ್ಹೊಟ್ಟೆ ತುಂಬಿಸುವುದು ರೈತನ ಬೆವರಹನಿ
ನಮ್ಮನ್ನು ರಕ್ಷಿಸುತ್ತಿರುವುದು ಯೋಧನ ನೆತ್ತರ ಹನಿ
ನಮ್ಮಿಂದಾಗುದು ಎಂದು ಎಲ್ಲಾ ಕೈಕಟ್ಟಿ ಕುಳಿತರೆ
ದೇಶದ ತುಂಬೆಲ್ಲಾ ಹರಡುವರು ಬರೀ ಭ್ರಷ್ಟರೇ

ಈ ಭೂತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆ
ನಮ್ಮ ಒಗ್ಗಟ್ಟಿನ ಬಲಕೆ ಎಂದೂ ಇಲ್ಲಾ ಕೊನೆ
ಬನ್ನಿ ಒಟ್ಟಾಗಿ ದುಡಿಯೋಣ ನಮ್ಮ ಸರ್ವೋದಯಕೆ
ಭೂಮಿಯ ಮೇಲಿನ ಶಾಂತಿ - ನೆಮ್ಮದಿಯೇ ಆ ದೇವರ ಬಯಕೆ