Tuesday, 29 April 2014

ಸ್ತ್ರೀ ಸಬಲೀಕರಣ ಎಂದರೆ ಅಷ್ಟೆ ಸಾಕೆ...!

     ಭಾರತಕ್ಕೆ ಸ್ವಾತಂತ್ರ ಸಿಕ್ಕಿ 6 ದಶಕಗಳು ಕಳೆದು ನಮ್ಮ ದೇಶ ವಿಶ್ವದ ಅತಿದೊಡ್ಡ ಗಣರಾಜ್ಯವಾಗಿ ಹೊರಹೊಮ್ಮಿ ಎಲ್ಲರಿಗೂ ಸಮಾನ ಹಕ್ಕು ಮತ್ತು ನ್ಯಾಯ ದೊರಕಬೇಕು ಎಂದು ಸಾಕಷ್ಟು ಕಾನೂನುಗಳು - ನಿಯಮಗಳು ರೂಪುಗೊಂಡಿವೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಸಶಕ್ತಿಕರಣಕ್ಕಾಗಿ ಸಾಕಾಷ್ಟು ಹೋರಾಟಗಳು ನಡೆದು ಅವರ ರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ರೂಪುರೇಷಗೊಳಿಸಲಾಗಿದೆ.

      ಸ್ತ್ರೀ ಸಬಲೀಕರಣ ಎಂಬ ವಿಷಯದ ಮೇಲೆ ಅನೇಕ ಸಂಘ-ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಸ್ಥಾಪಿತಗೊಂಡಿವೆ ಹಾಗೂ ಚುನಾವಣಾ ಸಮಯದಲ್ಲಿ ಈ ವಿಷಯದ ಮೇಲೆ ಮಾತನಾಡುವ ಸಾಕಷ್ಟು ನಾಯಕರುಗಳನ್ನು ನಾವು ಕಾಣಬಹುದು. ಆದರೆ ಕೆಲವು ಸತ್ಯಾಂಶಗಳನ್ನು ನಾವು ನೋಡಿದರೆ ನಿಜವಾಗಿಯೂ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತದೆ.
     ಇಲ್ಲಿ ನಾನು ನಿಮಗೆ ಕೆಲವು ಸರ್ಕಾರಿ ಮತ್ತು ಸರ್ಕಾರೇತರ ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ತಿಳಿಸ ಬಯಸುತ್ತೇನೆ.
ದಿ ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಎಂಬ ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದು 16ರಿಂದ 49ರ ವಯಸ್ಸಿನ ಸುಮಾರು ಮೂವತ್ತು ಸಾವಿರ ವಿವಾಹಿತ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿದಾಗ ಬಹಿರಂಗಗೊಂಡ ವಿಷಯಗಳು ನಮ್ಮ ದೇಶದಲ್ಲಿ ಗೃಹಿಣಿಯರ ಸುರಕ್ಷತೆಯ ಬಗ್ಗೆ ದಿಗ್ಬ್ರಮೆ ಮೂಡಿಸುತ್ತವೆ. ಈ ಸಮೀಕ್ಷೆಯಿಂದ ಹೊರಬಂದ ವಿಷಯಗಳಿಂತಿವೆ:

   ಐವರಲ್ಲಿ ಇಬ್ಬರು ಮಹಿಳೆಯರು ಇಂದಿಗೂ ಸಹ ತಮ್ಮ ಬಾಳಸಂಗಾತಿಯನ್ನು ಸ್ವ-ಇಚ್ಛೆಯಿಂದ ಆಯ್ಕೆಮಾಡಿಕೊಳ್ಳುವುದಿಲ್ಲ. ಇಬ್ಬರಲ್ಲಿ ಒಬ್ಬರು 18 ವರ್ಷಕ್ಕಿಂತ ಕೆಳಗೇ ವಿವಾಹವಾಗುತ್ತಾರೆ. ಶೇ.54ರಷ್ಟು ಮಂದಿ ಅನುಮತಿ ಇಲ್ಲದೆ ಮನೆಯಿಂದ ಹೊರಗೆ ಹೋಗಿದ್ದಕ್ಕೆ, ಶೇ.35ರಷ್ಟು ಮಂದಿ ಸರಿಯಾಗಿ ಅಡುಗೆ ಮಾಡದಿದ್ದಕ್ಕೆ, ಶೇ.46ರಷ್ಟು ಮಂದಿ ಮನೆಗೆಲಸಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಹಾಗೂ ಶೇ.36ರಷ್ಟು ಮಂದಿ ವರದಕ್ಷಿಣೆಯ ವಿಷಯವಾಗಿ ಪ್ರತಿದಿನ ದೈಹಿಕವಾಗಿ ಹಿಂಸಿಸಲ್ಪಡುತ್ತಾರೆ. ಭಾರತೀಯ ಮಹಿಳೆಯರು ಸರಾಸರಿ ರೂ.30 ಸಾವಿರದಷ್ಟು ಹಣವನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಶೇ.40ರಷ್ಟು ಮಂದಿ ಕಾರು, ಟಿ.ವಿ., ಬೈಕು ಮುಂತಾದ ವಸ್ತುಗಳ ರೂಪದಲ್ಲಿ ವರದಕ್ಷಿಣೆಯನ್ನು ನೀಡುತ್ತಾರೆ.

     ಇದು ಒಂದು ರೀತಿಯ ಸಮಸ್ಯೆಯಾದರೆ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ಬೃಹದಾಕಾರದಲ್ಲಿ ಕಾಡುತ್ತಿರುವ ಮತ್ತೊಂದು ಸಮಸ್ಯೆಯೆಂದರೆ ಅತ್ಯಾಚಾರ/ಲೈಂಗಿಕ ಕಿರುಕುಳ. ಹೆಣ್ಣನ್ನು ದೇವತೆ ಎಂದು ಪೂಜಿಸಿ-ಗೌರವಿಸುವ ನಮ್ಮ ಸುಸಂಸ್ಕೃತ ದೇಶದಲ್ಲಿ ಹೆಣ್ಣಿನ ಮಾನ-ಪ್ರಾಣಗಳಿಗೆ ಸರಿಯಾದ ರಕ್ಷಣೆಯನ್ನು ಒದಗಿಸುವುದರಲ್ಲಿ ನಾವು ಸಂಪೂರ್ಣ ವಿಫಲರಾಗಿದ್ದೇವೆ ಎಂಬ ಸತ್ಯವನ್ನು ಕೆಲವೊಂದು ಸಮೀಕ್ಷೆಗಳು ಬಹಿರಂಗ ಪಡಿಸಿವೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಅತ್ಯಾಚಾರ ಪ್ರಮಾಣ ಶೇ.26.4. ಅತ್ಯಾಚಾರ ಪ್ರಕರಣಗಳಲ್ಲಿ ಭಾರತಕ್ಕೆ ವಿಶ್ವದಲ್ಲಿ ಮೂರನೇ ಸ್ಥಾನ. ಈ ಸಂಸ್ಥೆಯ ವರದಿಯನುಸಾರ ಭಾರತದಲ್ಲಿ 2010ರಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಮಾಣ ಶೇ.7.1ರಷ್ಟು ಹೆಚ್ಚಿಗೆಯಾಗಿದೆ. ಈ ಸಂಸ್ಥೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ ಪ್ರತಿ 25-30 ನಿಮಿಷಕ್ಕೊಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. ಅತ್ಯಾಚಾರಕ್ಕೊಳಗಾಗುವ ಮೂವರಲ್ಲಿ ಒಬ್ಬರು 18 ವರ್ಷಕ್ಕಿಂತ ಹಾಗೂ ಹತ್ತರಲ್ಲಿ ಒಬ್ಬರು 14 ವರ್ಷಕ್ಕಿಂತ ಕೆಳಗಿನವರು.

      ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಆಂತರಿಕ ಸಮೀಕ್ಷೆ ಕೈಗೊಂಡಾಗ ಅಲ್ಲಿರುವ ಶೇ.53ರಷ್ಟು ಮಹಿಳಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿಗಳು ಲೈಂಗಿಕ ಕಿರುಕುಳಕ್ಕೊಳ ಪಟ್ಟಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿತು. ಸೆಂಟರ್ ಆಫ್ ರಿಸರ್ಚ್ ಆನ್ ವುಮೆನ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ.20ರಷ್ಟು ಪುರುಷರು ತಮ್ಮ ಪತ್ನಿಯರಿಗೆ ಸೆಕ್ಸಗಾಗಿ ಕಿರುಕುಳ ನೀಡುತ್ತಾರೆ.

     ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಆಡಳಿತ ರಾಜಧಾನಿ ದೆಹಲಿಯು ಅತ್ಯಾಚಾರಗಳ ರಾಜಧಾನಿಯಾಗಿ ಮಾರ್ಪಾಡಾಗಿರುವುದು ನಮ್ಮ ದುರಾದೃಷ್ಟವೇ ಸರಿ. ಹೌದು, ಟ್ರಿಪ್ ಅಡ್ವೈಸರ್ ಎಂಬ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಇದನ್ನು ಸಾಬೀತು ಪಡಿಸುವಂತಹ ವಿಷಯಗಳು ಬೆಳಕಿಗೆ ಬಂದಿವೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.84ರಷ್ಟು ಮಂದಿ ದೆಹಲಿಯೂ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಹಾಗೂ ಶೇ.16ರಷ್ಟು ಮಂದಿ ಮಾತ್ರ ತಾವು ಸ್ವಯಂ-ರಕ್ಷಣಾ ಸಾಮಾಗ್ರಿಗಳನ್ನು ಬಳಸುವುದಾಗಿ ತಿಳಿಸಿದ್ದಾರೆ.
ಹೆಲ್ತ್ ಎಕನಾಮಿಸ್ಟ್ ಸುಂದರಿ ರವೀಂದ್ರರ ಪ್ರಕಾರ ಅಸುರಕ್ಷಿತ ಗರ್ಭಪಾತದಿಂದಾಗಿ ಪ್ರತಿವರ್ಷ 15ರಿಂದ 20 ಸಾವಿರ ಮಹಿಳೆಯರು ಸಾವನ್ನಪ್ಪುತ್ತಾರೆ.

       ಮೇಲಿನ ಎಲ್ಲಾ ವರದಿಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ನಮ್ಮ ಅಕ್ಕ-ತಂಗಿಯರು, ತಾಯಂದಿರು ಎಷ್ಟು ಸುರಕ್ಷಿತ ಎಂಬುದು ನಮಗೆ ತಿಳಿಯುತ್ತದೆ. ಸ್ತ್ರೀ ಸಬಲೀಕರಣದ ಬಗ್ಗೆ ಭಾಷಣಗಳಲ್ಲಿ ಮತ್ತು ಹೋರಾಟಗಳಲ್ಲಿ ಬಡಾಯಿ ಕೊಚ್ಚಿಕಂಡರೆ ಸಾಲದು ವಿದ್ಯಾವಂತರಾದ ನಾವುಗಳು ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಮತ್ತು ಹುಟ್ಟಿದಾಗ ತಾಯಿಯಾಗಿ, ಬಾಲ್ಯದಲ್ಲಿ ಅಕ್ಕ/ತಂಗಿಯಾಗಿ, ಯೌವ್ವನಾವಸ್ಥೆಯಲ್ಲಿ ಗೆಳತಿ-ಮಡದಿಯಾಗಿ ಹಾಗೂ ಮುಪ್ಪಿನಲ್ಲಿ ಮಗಳಾಗಿ ನಮ್ಮ ಹಾರೈಕೆ ಮಾಡಿ, ಪ್ರತಿಯೊಂದು ಕೆಲಸದಲ್ಲೂ ನಮ್ಮ ಬೆನ್ನೆಲುಬಾಗಿ ನಿಲ್ಲುವ ಹೆಣ್ಣನ್ನು ಗೌರವಿಸುವುದನ್ನು ನಾವು ಕಲಿತು ಎಲ್ಲರಿಗೂ ಕಲಿಸಬೇಕು. ಸ್ತ್ರೀ ಸಬಲೀಕರಣ ಎಂದರಷ್ಟೇ ಸಾಲದು ಅದಕ್ಕೆ ಬೇಕಾದ ಸರಿಯಾದ ಕೆಲಸಗಳನ್ನು ಮಾಡುವಲ್ಲಿ ನಾವು ಶ್ರಮಿಸಬೇಕು.
ಹರ್ಷ...