Wednesday, 25 December 2013

ಅಟಲ್ ಬಿಹಾರಿ ವಾಜಪೇಯಿ

     ಅಟಲ್ ಬಿಹಾರಿ ವಾಜಪೇಯಿ (ಜನನ ಡಿಸೆಂಬರ್ 25, 1924)ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ, ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ. ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿಯವರು.
    ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್. ಎಸ್. ಎಸ್ )ವನ್ನು ಸೇರಿದರು.
    ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. 1996ರಲ್ಲಿ ಮತ್ತು ಇನ್ನೊಮ್ಮೆ 1998 ರಿಂದ 2004ರವರೆಗೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1984 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು.
    ಇವರು ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. 1977ರಲ್ಲಿ ಜನತಾ ಪಾರ್ಟಿ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌ಎಸ್‌ಎಸ್‌ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ಹಾಗೂ 1986ರಿಂದ 1993 ಮತ್ತು 1996ರಲ್ಲಿ ಕಾರ್ಯನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು.
    ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.

Thursday, 17 October 2013

ಅಂಬಾರಿ ಮೂಲ...!!!


     ಮೈಸೂರಿನ ಉತ್ಸವದಲ್ಲಿ ಗಮನ ಸೆಳೆಯುವುದು ರತ್ನಖಚಿತ 750 ಕೆಜಿ ತೂಕದ ಅಂಬಾರಿ. ಅಂಬಾರಿ ಮೂಲ ಹಾಗೂ ನಡೆದು ಬಂದ ಹಾದಿಯೇ ರೋಚಕ. ಇದರ ನಂಟು ಕೊಪ್ಪಳದ ಕುಮ್ಮಟದುರ್ಗಕ್ಕೂ ಇದೆ. ಅದು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.
    ಖ್ಯಾತ ಇತಿಹಾಸಕಾರ ಹುಲ್ಲೂರು ಶ್ರೀನಿವಾಸ ಜೋಯಿಸರು ತಮ್ಮ ಪುಸ್ತಕದಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇನ್ನು ಕುಮ್ಮಟ ದುರ್ಗದ ಇತಿಹಾಸದ ಮೇಲೆ ಅನೇಕರು ಡಾಕ್ಟರೇಟ್ ಪದವಿ ಪಡೆದಿದ್ದು, ಅವರೆಲ್ಲಾ ತಮ್ಮ ಸಂಶೋಧನೆಯಲ್ಲಿ ಕುರಿತು ದಾಖಲು ಮಾಡಿದ್ದಾರೆ ಎನ್ನುತ್ತಾರೆ ಹಿರಿಯ ಶಿಕ್ಷಕರಾದ ಬಿ.ಆರ್. ತುಬಾಕಿ.
ಏನಿದು ಇತಿಹಾಸ?
     ಈಗಿನ ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ರತ್ನ ಖಚಿತ ಅಂಬಾರಿ ಇದ್ದಿತು. ದೇವಗಿರಿ ನಾಶವಾದ ವೇಳೆ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕ ಎನ್ನುವವರಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಕೋರುತ್ತಾರೆ. ಮುಮ್ಮಡಿ ಸಿಂಗ ನಾಯಕ ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಮುಚ್ಚಿಡುತ್ತಾನೆ. ಈತನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾನೆ. ಕುಮ್ಮಟದುರ್ಗವನ್ನು ರಾಜಧಾನಿ ಮಾಡಿಕೊಳ್ಳುತ್ತಾನೆ. ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಮಗ ಯುವರಾಜನ ಕಾಲದಲ್ಲಿಯೂ ವಿಶೇಷ ಪೂಜೆ ನಡೆಯುತ್ತದೆ.
1327ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕಬುಕ್ಕರು ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು, ಕಾಣೆಯಾಗುತ್ತಾರೆ. 1336 ವೇಳೆಗೆ ದೆಹಲಿ ಸುಲ್ತಾನರು ನಾಶವಾದ ಸಮಯದಲ್ಲಿ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕ ಮುಂದಾಗುತ್ತಾನೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಲಾಗುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾನೆ. ಅಲ್ಲಿಗೆ ಅಂಬಾರಿ ಸ್ಥಳಾಂತರ ಮಾಡಲಾಗುತ್ತದೆ.
    ಸಂಗಮ, ಸಾಳವ, ತುಳು ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಅಳ್ವಿಕೆ ಮಾಡುತ್ತವೆ. ಇದು ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಬಳಿಕ ಶ್ರೀರಂಗಪಟ್ಟಣ, ಅದಾದ ನಂತರ ಮೈಸೂರಿಗೆ ಬರುತ್ತದೆ. ಹೀಗೆ, ಅಂಬಾರಿಯ ಹಿಂದೆ ರೋಚಕ ಇತಿಹಾಸ ಇದೆ.