ಮೈಸೂರಿನ ಉತ್ಸವದಲ್ಲಿ ಗಮನ ಸೆಳೆಯುವುದು ರತ್ನಖಚಿತ 750 ಕೆಜಿ ತೂಕದ ಅಂಬಾರಿ. ಈ ಅಂಬಾರಿ ಮೂಲ ಹಾಗೂ ನಡೆದು ಬಂದ ಹಾದಿಯೇ ರೋಚಕ. ಇದರ ನಂಟು ಕೊಪ್ಪಳದ ಕುಮ್ಮಟದುರ್ಗಕ್ಕೂ ಇದೆ. ಅದು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.
ಖ್ಯಾತ ಇತಿಹಾಸಕಾರ ಹುಲ್ಲೂರು ಶ್ರೀನಿವಾಸ ಜೋಯಿಸರು ತಮ್ಮ ಪುಸ್ತಕದಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇನ್ನು ಕುಮ್ಮಟ ದುರ್ಗದ ಇತಿಹಾಸದ ಮೇಲೆ ಅನೇಕರು ಡಾಕ್ಟರೇಟ್ ಪದವಿ ಪಡೆದಿದ್ದು, ಅವರೆಲ್ಲಾ ತಮ್ಮ ಸಂಶೋಧನೆಯಲ್ಲಿ ಈ ಕುರಿತು ದಾಖಲು ಮಾಡಿದ್ದಾರೆ ಎನ್ನುತ್ತಾರೆ ಹಿರಿಯ ಶಿಕ್ಷಕರಾದ ಬಿ.ಆರ್. ತುಬಾಕಿ.
ಏನಿದು ಇತಿಹಾಸ?
ಈಗಿನ ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇದ್ದಿತು. ದೇವಗಿರಿ ನಾಶವಾದ ವೇಳೆ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕ ಎನ್ನುವವರಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಕೋರುತ್ತಾರೆ. ಮುಮ್ಮಡಿ ಸಿಂಗ ನಾಯಕ ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಮುಚ್ಚಿಡುತ್ತಾನೆ. ಈತನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾನೆ. ಕುಮ್ಮಟದುರ್ಗವನ್ನು ರಾಜಧಾನಿ ಮಾಡಿಕೊಳ್ಳುತ್ತಾನೆ. ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಮಗ ಯುವರಾಜನ ಕಾಲದಲ್ಲಿಯೂ ವಿಶೇಷ ಪೂಜೆ ನಡೆಯುತ್ತದೆ.
1327ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕಬುಕ್ಕರು ಈ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು, ಕಾಣೆಯಾಗುತ್ತಾರೆ. 1336ರ ವೇಳೆಗೆ ದೆಹಲಿ ಸುಲ್ತಾನರು ನಾಶವಾದ ಸಮಯದಲ್ಲಿ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕ ಮುಂದಾಗುತ್ತಾನೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಲಾಗುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾನೆ. ಅಲ್ಲಿಗೆ ಈ ಅಂಬಾರಿ ಸ್ಥಳಾಂತರ ಮಾಡಲಾಗುತ್ತದೆ.
ಸಂಗಮ, ಸಾಳವ, ತುಳು ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಅಳ್ವಿಕೆ ಮಾಡುತ್ತವೆ. ಇದು ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಬಳಿಕ ಶ್ರೀರಂಗಪಟ್ಟಣ, ಅದಾದ ನಂತರ ಮೈಸೂರಿಗೆ ಬರುತ್ತದೆ. ಹೀಗೆ, ಅಂಬಾರಿಯ ಹಿಂದೆ ರೋಚಕ ಇತಿಹಾಸ ಇದೆ.
No comments:
Post a Comment