Thursday, 29 January 2015

ಪುಟ್ಟ ಮಗುವಂತೆ


ನಿನ್ನಂದಕೆ ಮನಸೋತೆ ನಾನು 
ನನ್ನ ಈ ಕಾವ್ಯದ ಭಾವ ನೀನು 
ನನ್ನಿಂದ ನೀನೆಷ್ಟೇ ದೂರ ಹೋದರು 
ಮರೆಯಲಾರೆ ನೀ ನನ್ನ ಮರೆತರೂ 

ಸೂರ್ಯ ರಶ್ಮಿಯ ಸ್ಪರ್ಶಕೆ ಹೂ ಅರಳಿದಂತೆ 
ನಿನ್ನ ನಗುವ ಸ್ಪರ್ಶಕೆ ನನ್ನ ಮನ ಅರಳಿತು 
ನದಿಯು ಓಡಿ ಕಡಲ ಅಪ್ಪಿ ಸೇರುವಂತೆ 
ನಿನ್ನ ಉಸಿರಲಿ ನನ್ನ ಜೀವ ಬೆರೆಯಿತು 

ನನ್ನ ಎದೆಯ ಗೂಡ ತೊಟ್ಟಿಲಲಿ 
ನಿನ್ನ ತೂಗುವೆ ಪುಟ್ಟ ಮಗುವಂತೆ 
ಕಳೆದೊಗುವ ಇಬ್ಬರೂ ಕಾಣದ ಊರಿನಲಿ 
ಈ ಲೋಕದ ಜನರ ಕೈಗೆ ನಿಲುಕದಂತೆ 

ಕನಸಲೂ ನಾ ಕಾಣಬಯಸುವೆ ನಿನ್ನನೇ 
ನಿನ್ನ ಸನಿಹದ ಹೊರತು ಬೇರೇನೂ ಬೇಡೆನು 
ನೀ ಜೊತೆಗಿದ್ದರೆ ನಾ ಮರೆಯುವೆ ಈ ಜಗವನೆ 
ನಿನಗಾಗಿ ಮುಡಿಪಿಟ್ಟಿರುವೆ ನನ್ನ ತನು-ಮನವನು

Tuesday, 27 January 2015

ನಿನ್ನ ಗಾನ


ಭಾವುಕನಾದೆ ಹಳೆಯ ನೆನಪುಗಳ ರಾಶಿಯಲಿ ಸಿಲುಕಿ 
ಕಣ್ಣೀರು ಬರುತಿದೆ ಬೋರ್ಗೊರೆವ ಪ್ರವಾಹದಂತೆ ಉಕ್ಕಿ 

ಮಾತುಗಳೆಲ್ಲಾ ಮೌನವಾಗಿ 
ಮನಸು ಒಡೆದು ಚೂರಾಗಿ 
ಹೃದಯ ಬಿಕ್ಕಿ ಅಳುತಿದೆ ಜೋರಾಗಿ 
ಕಣ್ಣು ಹೆಕ್ಕಿ ಹುಡುಕುತಿದೆ ನಿನಗಾಗಿ 

ನಿನ್ನ ಬೆಚ್ಚನೆಯ ಅಪ್ಪುಗೆಯಿಲ್ಲದೆ 
ಎದೆಯ ಬಡಿತ ಏರು-ಪೇರಾಗಿದೆ 
ಮುಂದೆ ಸಾಗಲು ದಾರಿ ಮರೆತು 
ನಿನ್ನ ನೆನಪಲಿ ನಾ ಹೋದೆ ಕಳೆದು 

ನೀ ಮರಳಿ ಬರುವೆ ಎಂಬ ನಂಬಿಕೆಯಲಿ 
ನೋವಲ್ಲೂ ನಗುತಿರುವೆ ಯಾಂತ್ರಿಕವಾಗಿ 
ಮನಸು ಬದಲಿಸಿ ನನ್ನ ಅರಸಿ ಬಾ ತಿರುಗಿ 
ನೀ ಜೊತೆಯಲ್ಲಿ ಇರದೆ ನಾ ಹೇಗೆ ಬದುಕಲಿ 

ಕಾರಣ ತಿಳಿಸದೆ ನೀ ನನ್ನ ತೊರೆದೆ 
ನಿನ್ನ ಅಗಲಿಕೆಯ ಬೇಸರ ತಾಳದೆ 
ಹೃದಯ ಹೊಂದಿದೆ ಅಕಾಲಿಕ ಮರಣ
ಮರೆಯದು ಮನ ಎಂದಿಗೂ ನಿನ್ನ ಗಾನ

Monday, 19 January 2015

ಬಡ ಹೃದಯ

ನೀ ತೆಗದುಕೊಳ್ಳುವ ಪ್ರತಿ ಉಸಿರನೂ
ನಿನ್ನ ಪ್ರತಿ ಚಲನ - ವಲನಗಳನೂ
ನೀ ನಡೆಯುವ ಪ್ರತಿ ಹೆಜ್ಜೆಯನೂ
ನಿನ್ನ ಪ್ರತಿಯೊಂದು ಮಾತುಗಳನೂ
ನಾ ನೋಡುತಿರುವೆ...

ಓ ಹುಡುಗಿಯೇ ನಿನಗಿದು ತಿಳಿಯದೆ
ನೀ ನನಗೆ ಮಾತ್ರ ಸೇರಿರುವ ಸ್ವತ್ತು
ನನ್ನ ಬಡ ಹೃದಯ ಬಳಲಿ ಸೋತಿದೆ
ನಿನ್ನ ಬರುವಿಕೆಗೆ ಕಾದು ಕುಳಿತು

ನೀ ನನ್ನ ತೋರೆದು ಹೋದ ಕ್ಷಣದಿಂದ
ಗುರುತೇ ಸಿಗದಂತೆ ಕಳೆದೋಗಿರುವೆ

ರಾತ್ರಿ ಕಾಣುವ ಕನಸಿನಲ್ಲೂ
ನಿನ್ನ ಮುಖವನು ಮಾತ್ರ ಕಾಣುವೆ
ಕಿವಿ ಮೇಲೆ ಬೀಳುವ ಎಲ್ಲ ಶಬ್ದದಲೂ
ನಿನ್ನ ಮುದ್ದಾದ ನಗುವನೇ ಕೇಳುವೆ

ನಿನ್ನ ಕಣ್ಣಲ್ಲಿ ನನ್ನ ಕಣ್ಣಿಟ್ಟು
ನಿನ್ನ ಪುಟ್ಟ ಹೃದಯವ ನನ್ನ ಹೃದಯದಲಿ ಬಚ್ಚಿಟ್ಟು
ಹಣೆಯ ಮೇಲೊಂದು ಸಿಹಿ ಮುತ್ತಿಟ್ಟು
ಉಳಿಸಿಕೊಳ್ಳುವೆ ಪ್ರೀತಿಯ ಪ್ರಾಣವನೇ ಪಣಕಿಟ್ಟು