Sunday 7 December 2014

ಒಮ್ಮೆ ಬಳಿ ಬಾರೆ

ನನ್ನ ಪ್ರತಿ ನಗುವಲು ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ ಹೆಸರನೇ ಪ್ರತಿಧ್ವನಿಸುತಿದೆ

ನವಿಲು ನಾಟ್ಯವ ಮರೆಯಬಹುದು
ಕೋಗಿಲೆ ಗಾನವ ನಿಲ್ಲಿಸಬಹುದು
ಮನವನು ಪೂರ್ಣವಾಗಿ ಆವರಿಸಿರುವ
ನಿನ್ನ ನೆನಪನು ಎಂದಿಗೂ ಅಳಿಸಲಾಗದು

ನಮ್ಮಿಬ್ಬರ ನಡುವಿನ ಅಂತರ ಹೆಚ್ಚಿದಷ್ಟೂ
ನಿನ್ನ ಮೇಲೆ ಪ್ರೀತಿ ಬೆಳೆಯುತಿದೆ ಬೆಟ್ಟದಷ್ಟು
ನೀ ಜೊತೆಗಿದ್ದರೆ ಸ್ವರ್ಗವೇ ಧರೆಗಿಳಿದಂತೆ
ಮರೆತು ಬಿಡುವೆ ನಾ ಜಗದ ಚಿಂತೆ

ನನ್ನ ಪ್ರತಿ ನಗುವಲು ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ ಹೆಸರನೇ ಪ್ರತಿಧ್ವನಿಸುತಿದೆ

ಮನಸು ಬಾಡಿದ ಹೂವಂತೆ ಮುದುಡಿ
ನಿನ್ನ ವಶವಾಗಿದೆ ನನ್ನೆಲ್ಲಾ ನರ-ನಾಡಿ
ಕಣ್ಣೀರು ಕರಗಿ ನದಿಯಂತೆ ಹರಿಯುತಿದೆ
ಇದು ನಾನೇನ? ಎಂಬ ಅನುಮಾನ ಬರುತಿದೆ

ನನ್ನ ಬದುಕಿಗೆ ನೀನೊಬ್ಬಳೆ ಒಡನಾಡಿ
ನೀನಿಲ್ಲದ ನಾನು ಚೂರಾದ ಕನ್ನಡಿ
ಅಗಲಿಕೆಯ ನೋವನು ನಾ ತಾಳಲಾರೆ
ಜೀವ ಹೋಗುವ ಮುನ್ನ ಒಮ್ಮೆ ಬಳಿ ಬಾರೆ

ನನ್ನ ಪ್ರತಿ ನಗುವಲು ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ ಹೆಸರನೇ ಪ್ರತಿಧ್ವನಿಸುತಿದೆ

Sunday 30 November 2014

ಒಂದೇ ಹಂಬಲ

ಕಾರ್ಮೋಡ ಕೂಡ ಕರಗಿ ನೀರಾಗುವುದು 
ಕಲ್ಲು ಬಂಡೆಯೂ ಸವೆದು ಮಣ್ಣಾಗುವುದು 
ರಣಹದ್ದು ಸಹ ಕ್ಷಣಕಾಲ ಕೆಳಗಿಳಿಯುವುದು 
ನನ್ನ  ಈ ಪ್ರೀತಿ ನಿನಗೆಂದು ತಿಳಿಯುವುದು 

ಕಡಲು ತೀರವನ್ನು ಮತ್ತೆ-ಮತ್ತೆ ಬಂದು ತಾಕುವಂತೆ 
ಸೂರ್ಯನ ಕಿರಣ ಬಿಡದೆ ಭೂಮಿಯನು ಚುಂಬಿಸುವಂತೆ 
ಧುಂಬಿಯೊಂದು ಹೂವನು ಜೇನಿಗಾಗಿ ಮುತ್ತಿಕ್ಕಿದಂತೆ 
ನಿನ್ನ ನೆನಪು ಕಾಡುತಿದೆ ನನ್ನನು ಸುಡುವ ಬೆಂಕಿಯಂತೆ 

ಮಗು ತಾಯಿ ಮಡಿಲ ಸೇರಲು ಹಂಬಲಿಸುವ ಹಾಗೆ 
ಹೃದಯ ಬಯಸಿದೆ ನಿನ್ನದೊಂದು ಸಣ್ಣ ಬಿಸಿ ಅಪ್ಪುಗೆ 
ನಿದಿರೆಯಲು ಕಾಡುತಿದೆ ನಿನ್ನ ಸುಂದರ ಮುಗುಳ್ನಗೆ 
ಈ ಪ್ರೀತಿಯ ಎಲ್ಲರಂತೆ ಹೇಳಿಕೊಳ್ಳಲು ಬಾರದೆ ನನಗೆ 

ನೀ ಬರುವ ದಾರಿಯ ಕಾಯುತ ಉರುಳುತಿದೆ ಕಾಲ 
ತಯಾರಿಲ್ಲ ಇಲ್ಲಿ ಯಾರೂ ಕೊಡಲು ಸಮಯದ ಸಾಲ
ನಿನ್ನ ಸೇರಬೇಕೆಂಬುದೆ ನನಗಿರುವ ಒಂದೇ ಹಂಬಲ 
ಇನ್ನೂ ಹೆಚ್ಚು ತಾಳಲಾರೆ ಈ ವಿರಹದ ಕೋಲಾಹಲ

Saturday 29 November 2014

ಐ ಲವ್ ಯೂ...

ನೀ ಮುನಿಸಿಕೊಂಡರೆ ನಾನೂ ಸಹ ಮುನಿಸಿಕೊಳ್ಳುವೆ
ನೀ ನನ್ನ ಮೇಲೆ ರೇಗಿದರೆ ನಾನೂ ರೇಗುವೆ
ನೀ ನನ್ನ ಜೊತೆ ಜಗಳ ಮಾಡಿದರೆ ನಾನೂ ಜಗಳ ಆಡುವೆ
ನೀ ನನ್ನ ಜೊತೆ ಮಾತು ಬಿಟ್ಟರೆ ನಾನೂ ಮಾತು ಬಿಡುವೆ

ನೀ ನನ್ನ ಮರೆತರೆ ಮಾತ್ರ ನಾನು ನನ್ನ ಉಸಿರೇ ಬಿಡುವೆ

ನೀ ಕೇಳಿಸಿಕೊಳ್ಳುವುದಿಲ್ಲ ಎಂದರೂ ಕೂಗಿ ಹೇಳುವೆ
ಹೇ... ಹೇ... ಲವ್ ಯೂ...
ನೀ ನಿಲ್ಲುವುದಿಲ್ಲ ಎಂದರೂ ತಡೆದು ನಿಲ್ಲಿಸಿ ಹೇಳುವೆ
ಹೇ... ಹೇ... ಲವ್ ಯೂ...

ನೀನಾಡುವ ಪ್ರತಿ ಮಾತು ಕವಿತೆಯೆಂದು ಹೇಳಲಾರೆ
ವಿಶ್ವದಲ್ಲೇ ನೀ ಅತಿ ಹೆಚ್ಚು ಸುಂದರಿ ಎಂದು ಹೊಗಳಲಾರೆ
ನೀ ಸ್ನಾನ ಮಾಡುವಾಗ ನಾನು ಕದ್ದು-ಕದ್ದು ನೋಡಲಾರೆ
ನೀ ಮಾಡುವ ಸನ್ನೆಗಳನ್ನು ನಾನು ತಿಳಿಯಲಾರೆ
ನನ್ನ ಕನಸಿನಲ್ಲೂ ಸಹ ನಿನ್ನ ಕಾಣಲಾರೆ
ನಿನಗಾಗಿ ನಾನು ಓಡಿ ಬರಲಾರೆ

ನೀ ನನ್ನ ಮರೆತರೆ ಮಾತ್ರ ನಾನು ನನ್ನ ಉಸಿರೇ ಬಿಡುವೆ

ನೀ ಕೇಳಿಸಿಕೊಳ್ಳುವುದಿಲ್ಲ ಎಂದರೂ ಕೂಗಿ ಹೇಳುವೆ
ಹೇ... ಹೇ... ಲವ್ ಯೂ...
ನೀ ನಿಲ್ಲುವುದಿಲ್ಲ ಎಂದರೂ ತಡೆದು ನಿಲ್ಲಿಸಿ ಹೇಳುವೆ
ಹೇ... ಹೇ... ಲವ್ ಯೂ...

ನನ್ನ ಮುತ್ತುಗಳಿಂದ ನಿನ್ನ ಗುಳಿಕೆನ್ನ ಹಿಗ್ಗುವಂತೆ ಮಾಡುವೆ
ನಿನ್ನ ಉಪ್ಪು-ಮೂಟೆ ಹೊತ್ತುಕೊಂಡು ಲಾಲಿಸಿ ಮಲಗಿಸುವೆ
ಅರಳುವ ಹೂವಿನಂತೆ ಮಧುರವಾಗಿರುವ ಹಾಡು ಹಾಡುವೆ
ಭಾನುವಾರವೂ ಸಹ ರಜೆ ನೀಡದೆ ನಿನ್ನ ಪ್ರೀತಿ ಮಾಡುವೆ
ನಿನ್ನ ನಾಚಿಕೆ - ಅಂಜಿಕೆ ಲಜ್ಜೆಯನ್ನು ಇಲ್ಲವಾಗಿಸುವೆ
ನೀ ಕೊಡುವ ಎಲ್ಲಾ ನೋವನು ನಾ ತಾಳುವೆ

ನೀ ನನ್ನ ಮರೆತರೆ ಮಾತ್ರ ನಾನು ನನ್ನ ಉಸಿರೇ ಬಿಡುವೆ

ನೀ ಕೇಳಿಸಿಕೊಳ್ಳುವುದಿಲ್ಲ ಎಂದರೂ ಕೂಗಿ ಹೇಳುವೆ
ಹೇ... ಹೇ... ಲವ್ ಯೂ...
ನೀ ನಿಲ್ಲುವುದಿಲ್ಲ ಎಂದರೂ ತಡೆದು ನಿಲ್ಲಿಸಿ ಹೇಳುವೆ
ಹೇ... ಹೇ... ಲವ್ ಯೂ...
Translated from Tamil Song.

ನೀ ಜೊತೆಗಿದ್ದರೆ

ಕಾಮನಬಿಲ್ಲಿನ ರಂಗು ಸೂಸುವ
ನಿನ್ನ ಕಣ್ಣ ನೋಟಕೆ ನಾ ಸೋತೆ
ಮೊನಾಲಿಸಾ ಚಿತ್ರವ ನಾಚಿಸುವ
ನಗುವಿನ ಅಲೆಯ ಬಲೆಗೆ ಸಿಲುಕಿದೆ

ನನ್ನ ಸಂಪೂರ್ಣವಾಗಿ ನೀ ಆವರಿಸಿರುವೆ
ಕನಸಲೂ ಸಹ ನಿನ್ನೇ ನಾ ಕಾಣುವೆ
ಹೃದಯ ಸೋತು ಶರಣಾಗಿದೆ ನಿನಗೆ
ಮನದಲಿ ಏನೋ ಭಯವಿದೆ ಸಣ್ಣಗೆ

ನಿನಗೇಳಲು ಬಯಸಿದ ಸಾವಿರ ಮಾತು
ತುಟಿಯಂಚಲೆ ಕಾಯುತಿದೆ ನಿಂತು
ಮಾತು ಮೌನದಲಿ ಮಣ್ಣಾಗುವ ಮೊದಲು
ಬಳಿ ಬರಬಾರದೆ ನೀನೊಮ್ಮೆ ಕೇಳಲು

ನೀನೀಗ ನನ್ನೊಳಗೆ ತುಂಬಿರುವೆ
ನಾನು ನೀನಾಗಿ ಬದಲಾಗಿರುವೆ
ಜಗವನೇ ಗೆಲ್ಲುವೆ ನೀ ಜೊತೆಗಿದ್ದರೆ
ಹೆಚ್ಚು ಕಾಡಿಸದೆ ಬೇಗ ಬಳಿಬಾರೆ

Saturday 22 November 2014

ಗಂಡಸರು ದೂರವಿಡಲು ಬಯಸುವ ಐದು ಬಗೆಯ ಹೆಂಗಸರು

              ಹೆಂಗಸರು ತಮ್ಮ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ತಾವೇ ಪ್ರಮುಖರು ಎಂಬುದನ್ನು ಸಾಬೀತು ಪಡಿಸುವುದಕ್ಕೋಸ್ಕರ ಗಂಡಸರ ಮೇಲೆ ಆರೋಪ ಹೊರಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ ಮತ್ತು ವಿಷಯವಾಗಿ ಗಂಡಸರನ್ನು ಯಾವಾವಲೂ ನಿಂದಿಸುತ್ತಾರೆ. ಆದರೆ ಪ್ರತಿಬಾರಿಯೂ ಗಂಡಸರೇ ನಿಂದನೆಗೆ ಒಳಗಾಗಬೇಕಿಲ್ಲ. ಗಂಡಸರ ಬಗೆಗಿನ ಕೆಲವು ವಿಷಯಗಳನ್ನು ಹೆಂಗಸರು ಹೇಗೆ ಮೂದಲಿಸುತ್ತಾರೋ ಹಾಗೆಯೇ ಗಂಡಸರೂ ಸಹ ಹೆಂಗಸರು ಮಾಡುವ ಕೆಲವು ವಿಷಯಗಳನ್ನು ಇಷ್ಟಪಡುವುದಿಲ್ಲ ಮತ್ತು ಅವರಿಂದ ಸಾಧ್ಯವಾದಷ್ಟು ದೂರವಿರಲು ಬಯಸುತ್ತಾರೆ. ಗಂಡಸರು ದೂರವಿರಲು ಬಯಸುವ ಕೆಲವು ಬಗೆಯ ಹೆಂಗಸರು ಯಾರೆಂದರೆ:

1) ತುಂಬಾ ಹಚ್ಚಿಕೊಂಡಿದ್ದೇನೆ ಎಂದು ಬಾಯಿಮಾತಿನಲ್ಲಿ ಹೇಳುವವರು.
                ಇವರು ಗಂಡಸರಿಗೆ ತುಂಬಾ ಭಯ ಮತ್ತು ಅಂಜಿಕೆಯನ್ನು ಉಂಟುಮಾಡುವವರು. ಗುಂಪಿಗೆ ಸೇರಿದವರು ಯಾವಾಗಲೂ ಸಹ ತಾವು ಮದುವೆ ಮಾಡಿಕೊಳ್ಳುವುದರ ಬಗ್ಗೆ ತೀರಾ ಹತಾಶೆಯಿಂದ ಮಾತನಾಡುತ್ತಿರುತ್ತಾರೆ. ಯಾರನ್ನಾದರು ತುಂಬಾ ಹಚ್ಚಿಕೊಳ್ಳುವುದು ಎಂದರೆ ಅದು ಅಭದ್ರತೆ, ಅನುಮಾನ, ಸ್ವಾಧೀನತೆ ಮತ್ತು ಸ್ವಂತ-ಸದಭಿಪ್ರಾಯಗಳ ಮಿಶ್ರಣ. ರೀತಿಯ ಹೆಂಗಸರ ಬಗ್ಗೆ ಗಂಡಸರು ಸಂಭಂದದಲ್ಲಿ ತುಂಬಾ ಆಳವಾಗಿ ಹೋದಾಗ ಗುರುತಿಸುತ್ತಾರೆ. ಪ್ರಾರಂಭದಲ್ಲಿ ಇವರು ತುಂಬಾ ಸ್ವತಂತ್ರವಾಗಿರುವುದಾಗಿ ತೋರಲ್ಪಟ್ಟರೂ ಒಮ್ಮೆ ಒಂದು ಸಂಭಂದದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಅನಿಸಿದಾಗ ಅವರ ನಿಜವಾದ ಅವಶ್ಯಕತೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತವೆ.

2) ನಾನು, ನನ್ನದು, ನನಗೆ ಎನ್ನುವವರು.
                ಗುಂಪಿಗೆ ಸೇರಿದವರು ಒಂದು ಸವಾಲಿದ್ದ ಹಾಗೆ. ಗಂಡಸರು ಇವರಿಗೆ ಒಂದು ಅವಕಾಶ ಕೊಟ್ಟು ಇವರ ಮೇಲೆ ಗೆಲ್ಲಲು ಇಷ್ಟಪಡುತ್ತಾರೆ. ಇವರಿಗಿರುವ ಸ್ವಶಕ್ತಿಯ ಕಾರಣ ಕಮಿಟ್ ಆಗಲು ಎಂದಿಗೂ ಬಯಸುವುದಿಲ್ಲ ಆದರೆ ಇವರ ಶಕ್ತಿಗೆ ಮರುಳಾಗಿ ರೀತಿಯ ಹೆಂಗಸರ ಮೇಲೆ ಗೆದ್ದು ವಿಜಯಿಯಾಗಲು ಬಯಸುತ್ತಾರೆ. ಗುಂಪಿಗೆ ಸೇರಿದವರಿಗೆ ಗಂಡಸರಿಗಿರುವ ಸ್ಪರ್ಧಾತ್ಮಕತೆ ಮತ್ತು ಹೆಂಗಸರಿಗಿರುವ ಸೂಕ್ಷ್ಮತೆ ಎರಡೂ ಇರುತ್ತದೆ. ಕೆಲವು ಅವಸರದ ಸಂದರ್ಭದಲ್ಲಿ ಇವರು ವ್ಯಾಮೋಹಕತೆಯಿಂದ ಭಾವುಕರಾಗಿ ಬದಲಾಗಬಲ್ಲರು. ವಾಸ್ತವವಾಗಿ ಹೇಳಬೇಕೆಂದರೆ ಇವರು ಗಂಡಸರ ಬಗೆಗಿನ ತಮ್ಮ ದ್ವೇಷವನ್ನು ನೋವನ್ನು ಉಂಟುಮಾಡಿಕೊಳ್ಳುವುದರಿಂದ ದೂರವಿರಿಸಿಕೊಳ್ಳಲು ಒಂದು ಬಗೆಯ ರಕ್ಷಣಾ ಫಲಕವಾಗಿ ಉಪಯೋಗಿಸಿಕೊಳ್ಳುತ್ತಾರೆ.

3) ನಾನೇ ಪರಮಶ್ರೇಷ್ಠಳು ಎಂದುಕೊಂಡಿರುವವರು.
                ಯಶಸ್ವೀ ಮಹಿಳೆಯರು ತಮ್ಮನ್ನು ಅಳಿವಿನಂಚಿನಲ್ಲಿರುವವರಂತೆ ಕಾಣುತ್ತಾರೆ ಎಂದು ಕೆಲವು ಗಂಡಸರು ಅಭಿಪ್ರಾಯ ಪಡುತ್ತಾರೆ. ತುಂಬಾ ಹೆಂಗಸರು ತಾವೇ ಸಂಪಾದನೆಯನ್ನು ಮಾಡುವುದರಿಂದ, ಸ್ವಂತ ಮನೆಯನ್ನು ಹೊಂದಿರುವುದರಿಂದ ಮತ್ತು ಒಳ್ಳೆಯ ಸಾಮಾಜಿಕ ಜೀವನವನ್ನು ನಡೆಸುತ್ತಿರುವುದರಿಂದ ತಮ್ಮನ್ನು ಸಂತೋಷವಾಗಿರಿಸಲು ಯಾವ ಗಂಡಸರ ಸಹಾಯವೂ ಬೇಡ ಎಂದು ಪದೇಪದೇ ಹೇಳುತ್ತಿರುತ್ತಾರೆ. ಇವರು ಗಂಡಸರ ಮೇಲೆ ಅವಲಂಭಿತರಾಗಲು ಬಯಸುವುದಿಲ್ಲ. ಇದೇ ವಿಷಯವೇ ಗಂಡಸರು ಇವರನ್ನು ದೂರವಿಡಲು ಕಾರಣ. ಕಂಡಿತವಾಗಿಯೂ ಗಂಡಸರೂ ಸಹ ತಮ್ಮ ಮೇಲೆ ಸಂಪೂರ್ಣವಾಗಿ ಅವಲಂಭಿತರಾಗುವ ಹೆಂಗಸರನ್ನು ಇಷ್ಟಪಡುವುದಿಲ್ಲ. ಆದರೆ ತಮ್ಮ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದ್ದರೂ ಸಹ ತಮ್ಮನ್ನು ತಾವು ಗಂಡಸರ ಮೇಲೆ ಅವಲಂಭಿತರಾಗುವಂತೆ ಮಾಡಿಕೊಳ್ಳುವ ಹೆಂಗಸರನ್ನು ಗಂಡಸರು ತುಂಬಾ ಪ್ರೀತಿಸುತ್ತಾರೆ ಮತ್ತು ಶ್ಲಾಘಿಸುತ್ತಾರೆ.

4) ವಟಗುಟ್ಟುವ ಪೆಟ್ಟಿಗೆಯಂತವರು (ವಾಚಾಳಿಗಳು).
                ಗಂಡಸರ ಪ್ರಕಾರ ಅತಿಯಾಗಿ ಮಾತನಾಡುವ ಹೆಂಗಸರು ಒಳ್ಳೆಯವರೂ ಅಲ್ಲ ಹಾಗೆಯೇ ಕೆಟ್ಟವರೂ ಅಲ್ಲ. ತುಂಬಾ ಹೆಂಗಸರು ಅತಿಯಾಗಿ ಮಾತನಾಡುವ ಆರೋಪವನ್ನು ಎದುರಿಸುತ್ತಾರೆ. ಹೆಂಗಸರ ಪ್ರಪಂಚದಲ್ಲಿ ಎಲ್ಲರೂ ಒಟ್ಟಿಗೆ ಮಾತನಾಡುತ್ತಾರೆ. ಗಂಡಸರ ಪ್ರಪಂಚದಲ್ಲಿ ಒಬ್ಬರು ಮಾತನಾಡಿ ಮುಗಿಸುವವರೆಗೂ ಮತ್ತೊಬ್ಬರು ಮಾತನಾಡುವುದಿಲ್ಲ ಮತ್ತು ಮಾತನಾಡಿತ್ತಿರುವವರಿಗೆ ಅಡಚಣೆ ಉಂಟುಮಾಡುವುದಿಲ್ಲ. ಹಾಗಾಗಿಯೇ ಹೆಂಗಸರು ಕೇಳಿದ ಪ್ರಶ್ನೆಗೆ ಗಂಡಸರು ಉತ್ತರಿಸುತ್ತಿರುವಾಗ ಆಕೆ ಮಧ್ಯ ಪ್ರವೇಶಿಸಿ ತನ್ನ ಅಭಿಪ್ರಾಯವನ್ನು ಹೇಳಲು ಪ್ರಾರಂಭಿಸಿದಾಗ ಗಂಡಸರು ಮಾತನಾಡುವುದನ್ನು ಅಲ್ಲಿಗೇ ನಿಲ್ಲಿಸಿಬಿಡುತ್ತಾರೆ.

5) ನನ್ನ ಮನಸ್ಸನ್ನು ಓದಿ ಎನ್ನುವವರು.
                ಕೆಲವು ಕಾರಣಕ್ಕಾಗಿ ಹೆಂಗಸರು ತಾವು ಯಾವಾಗಲು ಏನನ್ನು ಯೋಚಿಸುತ್ತೀದ್ದೇವೆ ಎಂಬುದನ್ನು ಗಂಡಸರು ತಾವಾಗಿಯೇ ತಿಳಿದುಕೊಳ್ಳಲಿ ಎಂದು ನಿರಿಕ್ಷಿಸುತ್ತಾರೆ. ಇದರ ಪರಿಣಾಮವಾಗಿ ಆಕೆ ಆತನನ್ನು ನಿರಂತರವಾಗಿ ಪರೀಕ್ಷಿಸುತ್ತಿರುತ್ತಾಳೆ. ಅವನ ಪ್ರತಿಕ್ರಿಯೆಯನ್ನು ಪ್ರೀತಿಯ ಮಟ್ಟವನ್ನು ಅಳೆಯುವ ಒಂದು ಮಾನದಂಡವಾಗಿ ಉಪಯೋಗಿಸುತ್ತಾಳೆ. ರೀತಿಯ ನಡವಳಿಕೆ ಗಂಡಸರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಕೆಲವೇ ಕೆಲವು ಗಂಡಸರು ಮಾತ್ರ ಬಗೆಯ ಸತತವಾದ ಕಿರಿಕಿರಿಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬದುಕುತ್ತಾರೆ.

Friday 21 November 2014

ಓ ಗೆಳತಿ...!

ನನ್ನ ಪ್ರತಿ ಯೋಚನೆ, ಆಲೋಚನೆಯಲು ನೀನೆ
ನಮ್ಮ ಸ್ನೇಹವಾ... ನಾ ಎಂದೂ ಬಿಡೆನೆ ||

ಮರೆತುಬಿಟ್ಟೆ ನನ್ನನ್ನೆ ನಾ
ಅಳಿಸಲಾಗದ ನೆನೆಪೆ ನೀನಾ
ಬೇರ್ಪಡಿಸಲಾಗದ ಸ್ನೇಹ ಇದು
ನನಗೆ ನೀ ಏಳೇಳು ಜನ್ಮದ ಬಂಧು

ನನ್ನೊಳಗೆಲ್ಲಾ ನಿನ್ನ ಆಲೋಚನೆಯೆ ತುಂಬಿದೆ
ಇದು ನಾನೇನಾ ಎಂಬ ಅನುಮಾನ ಬಂದಿದೆ
ನನ್ನ ಲೋಕ ಕಿರಿದಾಗಿದೆ, ನನ್ನ ವೈಖರಿ ಬದಲಾಗಿದೆ
ನಿನ್ನ ತುಂಟತನಕೆ ನಗುತ ತಾಳ ಹಾಕಿದೆ

ನನ್ನ ದಾರಿ ತಪ್ಪಿದೆ ನಿನ್ನ ಹಿಂದಿಂದೆ ನಡೆದಿದೆ
ಗೆಳತಿ, ನಿನ್ನ ಹೆಜ್ಜೆಯನ್ನೇ ಹಿಂಬಾಲಿಸಿದೆ

ನೂರು ವರುಷ ನಿನ್ನ ಹೀಗೆ ನೋಡೋ ಆಸೆ ಸಾಲದೆ
ಹೇಗೆ ಮುಂದೆ ಮಿಡಿಯಲಿಯೆಂದು ನನ್ನ ಹೃದಯ ಕೇಳಿದೆ
ನನ್ನ ಕನಸಿನಿಂದ ನೀ ದೂರ ಹೋಗಲು ಬಿಡದೆ
ನಿದಿರೆಯಲ್ಲೇ ಕಟ್ಟಿ ಹಾಕುವೆ ರೆಪ್ಪೆ ತೆರೆಯದೆ

ಮತ್ತೆ ಯಾರಿಗೂ ನಿನ್ನ ತೋರಿಸದೆ ನನ್ನೊಳಗೆ ಬಚ್ಚಿಡುವೆ
ನನ್ನ ಉಸಿರನೇ ಉಯ್ಯಾಲೆ ಮಾಡಿ ನಿನ್ನ ತೂಗುವೆ

ನನ್ನ ಪ್ರತಿ ಯೋಚನೆ, ಆಲೋಚನೆಯಲು ನೀನೆ
ನಮ್ಮ ಸ್ನೇಹವಾ... ನಾ ಎಂದೂ ಬಿಡೆನೆ ||

Friday 7 November 2014

ಹುಟ್ಟುಹಬ್ಬದ ಶುಭಾಷಯಗಳು

ನಿನ್ನ ನಾನು ಕಂಡ ಒಡನೆ; ರೆಕ್ಕೆ ಬಂದ ಹಕ್ಕಿಯಾದೆ
ನಿನ್ನ ನಗುವ ಹೊಳಪಿನೊಳಗೆ; ಇಡೀ ಜಗವ ನಾ ಮರೆತೆ
ಒಂದು ಕ್ಷಣದಲ್ಲೇ ನೀ ನನಗೆ ಕಾಮನಬಿಲ್ಲಾದೆ
ಮರು ಕ್ಷಣವೆ ನಾ ಸೋತು ನಿನಗೆ ದಾಸನಾದೆ

ಹೇ ಸುಂದರಿಯೇ, ವಿಶ್ವ ಸುಂದರಿಯೇ
ಯಾರು ಇಲ್ಲ ನಿನ್ನ ಹಾಗೆ
ಬಾರೆ ಬಳಿಗೆ, ನನ್ನ ಮನದೊಳಗೆ
ಇರುವ ಎಂದೂ ಜೊತೆಯಾಗಿ

ದೇವತೆಯ ಶಿಲ್ಪವು ಜೀವ ಪಡೆದು ಭೂಮಿಯಲ್ಲಿ ನಡೆದಂತಿದೆ
ನಿನ್ನ ಗಾನ - ನಾಟ್ಯವ ಕಂಡು ನಾ ಕರಗಿ ನೀರಾದೆ
ನೀ ನಡೆದು ಹೋದ ದಾರಿಯೆಲ್ಲಾ ರಂಗೋಲಿ ಹಾಕಿದಂತಿದೆ
ನಿನ್ನ ಒಂದು ಸಣ್ಣ ಮಾತು ಕೇಳಲು ನನ್ನ ಹೃದಯ ಕಾಯುತಿದೆ

ಕತ್ತಲೆಯ ನೀಗಿಸುವ ಹಾಗೆ ನಿನ್ನ ಸೌಂದರ್ಯ ಹೊಳೆಯುತಿದೆ
ಇಡೀ ಜಗದ ಸೌಂದರ್ಯವೇ ನಿನ್ನ ಕಣ್ಣ ಮಿಂಚಲ್ಲಿದೆ
ನಿನ್ನ ಸೇರಲು ನನ್ನ ಪಯಣ ನಿನ್ನ ಬಳಿಗೇ ಸಾಗಿದೆ
ನೀ ಸಿಗದೆ ದಾರಿಯೂ ನಡೆದು ನಡೆದು ಸಾಕಾಗಿದೆ

ನಿನ್ನ ಅಂದದಿಂದ
ನನ್ನ ಹೃದಯ ತನ್ನ ಸ್ಥಿತಿಯ
ಮರೆತು ಮರೆತು
ನಿನ್ನ ಬಳಿಗೆ ಬರುತಿದೆ
ನಿನ್ನ ನೋಡಲು ಕಾದಿದೆ

Saturday 11 October 2014

ಅಮಿತಾಭ್ ಬಚ್ಚನ್


ಭಾರತ ಚಿತ್ರರಂಗ ಕಂಡ ಅತ್ಯದ್ಭುತ ನಟ ಅಮಿತಾಭ್ ಬಚ್ಚನ್. ಕೇವಲ ನಟನೆಯಿಂದ ಮಾತ್ರವಲ್ಲ ತಮ್ಮ ನಡೆ-ನುಡಿ ಮತ್ತು ಸಾಮಾಜಿಕ ಕಳಕಳಿಯಿಂದಲೂ ಸಹ ಸಾಕಷ್ಟು ಜನರಿಗೆ ಇಂದಿಗೂ ಸ್ಪೂರ್ತಿಯಾಗಿದ್ದಾರೆ. ಅಮಿತಾಭ್ ಅನ್ನೋ ಹೆಸರು ಕೇಳಿದರೆ ಏನೋ ಒಂದು ರೀತಿಯ ರೋಮಾಂಚನ ಮತ್ತು ಯಾವುದೋ ಸ್ಪೂರ್ತಿ ನಮ್ಮನ್ನು ಉತ್ಸಾಹಿಗಳನ್ನಾಗಿ ಮಾಡುತ್ತದೆ. ಇಂಥಾ ಮಹಾನ್ ವ್ಯಕ್ತಿಯ ಬಗ್ಗೆ ಯಾರಿಗೂ ಹೆಚ್ಚು ಹೇಳಬೇಕಿಲ್ಲ. ಭಾರತದ ಚಿತ್ರರಂಗದ ಬಗ್ಗೆ ತಿಳಿದಿರುವ ಪ್ರತಿಯೊಬ್ಬರಿಗೂ ಅಮಿತಾಭ್ ಚಿರಪರಿಚಿತ. ವಯಸ್ಸಿನ ಬೇಧ-ಭಾವವಿಲ್ಲದೆ ಎಲ್ಲಾ ರೀತಿಯ ಪ್ರೇಕ್ಷಕ ವರ್ಗವನ್ನು ಹೊಂದಿರುವ ನಟ ಅಮಿತಾಭ್. ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ ಎಂಬುದನ್ನು ಇವರನ್ನು ನೋಡೇ ಹೇಳಿರಬೇಕು. 71 ವಸಂತ ಕಳೆದರೂ ಬತ್ತದ ಉತ್ಸಾಹ, ಮುಖದಲ್ಲಿ ಬಾಡದ ಮಂದಹಾಸ ಮತ್ತು ಕೆಲಸದ ಮೇಲಿನ ಶ್ರದ್ಧೆ-ಆಸಕ್ತಿ ಎಂತಹವರನ್ನೂ ಸಹ ನಾಚುವಂತೆ ಮಾಡುತ್ತದೆ. ಇಂಥಾ ಅದ್ಭುತ ನಟ ಇಂದು 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರು ಹೊಂದಿರುವ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನೂ ಕೂಡ ಒಬ್ಬ. ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಾದ ನಮಗೆ ಒಂದು ರೀತಿಯ ಹಬ್ಬ. ಅವರ ಹುಟ್ಟುಹಬ್ಬವನ್ನು ಒಬ್ಬೊಬ್ಬ ಅಭಿಮಾನಿಯೂ ಒಂದು ರೀತಿ ಆಚರಿಸುತ್ತಾರೆ. ಅದೇ ರೀತಿ ನಾನೂ ಕೂಡ ಅವರ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಇಲ್ಲಿ ಬರೆದು ಪ್ರಕಟಿಸುವ ಮೂಲಕ ಈ ವರ್ಷದ ಅವರ ಹುಟ್ಟುಹಬ್ಬವನ್ನು ಆಚರಿಸಲು ಇಚ್ಛಿಸಿದ್ದೇನೆ.
ಅಮಿತಾಭ್'ರ ಜೀವನದ ಅತ್ಯಾಶ್ಚರ್ಯಕರ ಸಂಗತಿಗಳು:
1) ಅಮಿತಾಭ್ ಬಚ್ಚನ್ ತಮ್ಮ ಎರಡೂ ಕೈಗಳಿಂದ ಸರಾಗವಾಗಿ ಬರೆಯಬಲ್ಲರು.
2) ಇವರ ತಂದೆ ಮೊದಲು ಇವರಿಗೆ "ಇಂಕಿಲಾಬ್"(ಕ್ರಾಂತಿಕಾರಿ) ಎಂಬ ಹೆಸರನ್ನಿಡಲು ಇಚ್ಛಿಸಿದ್ದರು. ಆದರೆ ನಂತರ "ಅಮಿತಾಭ್"(ಅನಿಯಮಿತ ಕಾಂತಿ) ಎಂದು ನಾಮಕರಣ ಮಾಡಿದರು.
3) ಅಮಿತಾಭ್ ತಾವು ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಹಾಗೆಯೇ ಭಾರತೀಯ ವಾಯು ಸೇನೆಯನ್ನು ಸೇರಬೇಕೆಂದು ಆಲೋಚಿಸಿದ್ದರು.
4) ತಮ್ಮ ವೃತ್ತಿ ಜೀವನದ ಹೋರಾಟದ ದಿನಗಳಲ್ಲಿ ಅಮಿತಾಭ್ ಅವರು ಮುಂಬೈನ ಮರೈನ್ ಡ್ರೈವ್'ನ ಬೆಂಚ್'ಗಳ ಮೇಲೆ ಹಲವು ರಾತ್ರಿಗಳನ್ನು ಕಳೆದಿದ್ದರು.
5) "ಖುದಾ ಗವಾಹ್" ಚಿತ್ರದ ಚಿತ್ರಿಕರಣಕ್ಕಾಗಿ ಅಫ್ಘಾನಿಸ್ತಾನಕ್ಕೆ ತೆರಳಿದ್ದಾಗ ಅಲ್ಲಿನ ಆಗಿನ ಅಧ್ಯಕ್ಷರು ತಮ್ಮ ದೇಶದ ಅರ್ಧ ವಾಯುಸೇನೆಯನ್ನು ಅಮಿತಾಭ್ ಅವರ ರಕ್ಷಣೆಗೆ ಕಳುಹಿಸಿಕೊಟ್ಟಿದ್ದರು.
6) "ಖುದಾ ಗವಾಹ್" ಚಿತ್ರವು ಅಫ್ಘಾನಿಸ್ತಾನದ ಇತಿಹಾಸದಲ್ಲೇ ಅತಿಹೆಚ್ಚು ನೋಡಲ್ಪಟ್ಟ ಭಾರತೀಯ ಚಿತ್ರ.
7) ಅಮಿತಾಭ್ ಅವರ ನೆನಪಿನ ಶಕ್ತಿ ತುಂಬಾ ಅಗಾಧವಾದದ್ದು. ತಮ್ಮ ಆತ್ಮೀಯರ ಹುಟ್ಟುಹಬ್ಬದಂದು ಅವರು ತಪ್ಪದೇ ಪ್ರತಿವರ್ಷವೂ ಶುಭಾಷಯಗಳನ್ನು ತಿಳಿಸುತ್ತಾರೆ.
8) ಅಮಿತಾಭ್ ಅವರ ಪ್ರಕಾರ ಚಿತ್ರರಂಗದಲ್ಲೇ ಅತೀ ಸುಂದರ ನಟಿ ಎಂದರೆ "ವಹೀದಾ ರೆಹಮಾನ್".
9) ಇಡೀ ಏಷಿಯಾದಿಂದ ಮೇಡಮ್ ಟುಸ್ಸೌಡ್ಸ್'ನಲ್ಲಿ ಮೇಣದ ಪ್ರತಿಮೆಯನ್ನು ಹೊಂದಿದ ಮೊದಲಿಗರು ಅಮಿತಾಭ್.
10) ವಿಶ್ವ ಚಿತ್ರರಂಗದಲ್ಲೇ ದಂತಕಥೆಗಳಾದ ಚಾರ್ಲೀ ಚಾಪ್ಲಿನ್, ಮರ್ಲೋನ್ ಬ್ರಾಂಡೊ ಮತ್ತು ಲಾರೆನ್ಸ್ ಒಲಿವಿಯರ್ ಅವರ ತೀವ್ರ ಪೈಪೋಟಿಯ ನಡುವೆಯೂ ಸಹ ಬಿಬಿಸಿಯವರು ನಡೆಸಿದ ಅಂರ್ತಜಾಲ ಸಮೀಕ್ಷೆಯಲ್ಲಿ ಅಮಿತಾಭ್ ಬಚ್ಚನ್ ಅವರು "ಸ್ಟಾರ್ ಆಫ್ ದಿ ಮಿಲೇನಿಯಮ್" ಗೌರವಕ್ಕೆ ಪಾತ್ರರಾಗಿದ್ದಾರೆ.
11) ಕಂಠದಾನ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾಗ ಅಮಿತಾಭ್ ಅವರ ಸಂಬಳ ರೂ.500.
12) ಬಿಗ್ ಬಿ ಎಂದು ಅಮಿತಾಭ್ ಅವರನ್ನು ಕರೆಯಲು ಕಾರಣ ಅವರ ಎತ್ತರ (1.88ಮೀ). "ಮೃತ್ಯದಾತ" ಚಿತ್ರದ ನಂತರ ಎಲ್ಲರೂ ಅವರನ್ನು ಇದೇ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು.
13) ನಾಯಕ ನಟನಾಗುವುದಕ್ಕಿಂತಲೂ ಮೊದಲು ಅಮಿತಾಭ್ ಕಂಠದಾನ ಕಲಾವಿದರಾಗಿದ್ದರು. ಸಾಕಷ್ಟು ಪಾತ್ರಗಳಿಗೆ ಅವರು ಧ್ವನಿ ನೀಡಿದ್ದಾರೆ.
14) ತುಂಬಾ ಅಪೂರ್ವವಾದ ಧ್ವನಿಯನ್ನು (ಕಂಠ) ಹೊದ್ದಿದ್ದರೂ ಸಹ ಆಲ್ ಇಂಡಿಯಾ ರೇಡಿಯೋ ಮತ್ತು ಏಸ್ ರೇಡಿಯೋ ಅಮಿತಾಭ್ ಅವರನ್ನು ರೇಡಿಯೋ ನಿರೂಪಕರಾಗಿ ಸೇರಿಸಿಕೊಳ್ಳಲು ನಿರಾಕರಿಸಿದ್ದರು.
15) "ಸಾಥ್ ಹಿಂದೂಸ್ಥಾನಿ" ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
16) ಅಮಿತಾಭ್ ಅವರು ತಮ್ಮ ಮೊದಲ ಚಿತ್ರಕ್ಕಾಗಿ ಪಡೆದ ಸಂಭಾವನೆ ರೂ.1000.
17) ಅಮಿತಾಭ್ ಅವರ ಮೊದಲ ದೊಡ್ಡ ಸೂಪರ್ ಹಿಟ್ ಚಿತ್ರ "ಜಂಜೀರ್". ಇದಕ್ಕೂ ಮೊದಲು 12 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದರು.
18) ಅಮಿತಾಭ್ ಅವರಿಗೆ ತುಂಬಾ ಇಷ್ಟವಾದ ತೆರೆಯ ಮೇಲಿನ ಪಾತ್ರದ ಹೆಸರು "ವಿಜಯ್". ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರ ಹೆಸರು ಇದೇ ಆಗಿದೆ. ಇವರ ಮತ್ತೊಂದು ಇಷ್ಟದ ಹೆಸರು "ಅಮಿತ್".
19) ತಮ್ಮ ಪತ್ನಿ ಜಯಾ ಭಾದುರಿ ಅವರನ್ನು ಅಮಿತಾಭ್ ಅವರು ಮೊದಲು ಭೇಟಿಯಾಗಿದ್ದು ಪುಣೆಯ ಫಿಲ್ಮ್ ಅಂಡ್ ಟೆಲೆವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ. ನಂತರ "ಗುಡ್ಡಿ" ಚಿತ್ರದ ಸೆಟ್'ನಲ್ಲಿ.
20) 1971ರಿಂದ (ಆನಂದ್) 1988ರವರೆಗೆ (ಷಹೇನ್ಷಾ) ಪ್ರತಿವರ್ಷವೂ ಸಹ ಥಿಯೇಟರ್'ನಲ್ಲಿ ವರ್ಷಕ್ಕೆ ಕನಿಷ್ಟ ಒಂದರಂತೆ ಒಂದು ವರ್ಷ ಆಚರಿಸಿಕೊಂಡಂಥ ಸಿನಿಮಾಗಳನ್ನು ನೀಡಿದ ಏಕೈಕ ನಟ ಅಮಿತಾಭ್.
21) ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಅಭಿನಯಿಸಿದ ನಟ ಎಂದರೆ ಅಮಿತಾಭ್. "ಮಹಾನ್" ಚಿತ್ರದಲ್ಲಿ ತ್ರಿಪಾತ್ರದಲ್ಲಿ ಅಭಿನಯಿಸಿದ್ದಾರೆ.
22) ಅಮಿತಾಭ್ ಅವರನ್ನು ತಲೆಯಲ್ಲಿ ಇಟ್ಟುಕೊಂಡು "ಮಿ.ಇಂಡಿಯಾ" ಚಿತ್ರದ ಕಥೆಯನ್ನು ಜಾವೇದ್-ಸಲೀಮ್ ಬರೆದಿದ್ದರು. ಕಾರಣಾಂತರಗಳಿಂದ ಅನಿಲ್ ಕಪೂರ್ ಆ ಪಾತ್ರ ಮಾಡಿದರು.
23) ಅಮಿತಾಭ್ ಬಚ್ಚನ್ ಸಸ್ಯಹಾರಿ.
24) 2001ರಲ್ಲಿ ಅಮಿತಾಭ್ ಈಜಿಪ್ಟ್'ನಲ್ಲಿ ನಡೆದ ಅಲೆಕ್ಸಾಂಡ್ರಿಯಾ ಫಿಲ್ಂ ಫೆಸ್ಟಿವಲ್'ನಲ್ಲಿ "ಆ್ಯಕ್ಟರ್ ಆಫ್ ದಿ ಸೆಂಚುರಿ" ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
25) ಅಕ್ಟೋಬರ್ 31, 2006ರಂದು ಕೇವಲ 5 ಗಂಟೆಯಲ್ಲಿ "ಶೂಟೌಟ್ ಅಟ್ ಲೋಖಂದ್ವಾಲ" ಚಿತ್ರದ 23 ಸೀನ್'ಗಳಿಗೆ ರೆಕಾರ್ಡಿಂಗ್ ಮಾಡುವ ಮೂಲಕ ಅಮಿತಾಭ್ ಅವರು ಇಡೀ ಚಿತ್ರತಂಡವೇ ಬೆರಗಾಗುವಂತೆ ಮಾಡಿದ್ದರು.
26) ಅಮಿತಾಭ್ ಮಗಳು ಶ್ವೇತಾಳ ಪತಿ ನಿಖಿಲ್ ನಂದಾ ಅವರ ತಾಯಿ ಹಿಂದಿ ಚಿತ್ರರಂಗದ ಮೇರು ನಟ ರಾಜ್ ಕಪೂರ್'ರ ಪುತ್ರಿ.
27) ಅಮಿತಾಭ್ ಅವರಿಗೆ ಸೂಟ್'ಗಳೆಂದರೆ ಬಹಳಾ ವ್ಯಾಮೋಹ. ಅವರ ನೆಚ್ಚಿನ ಬ್ರ್ಯಾಂಡ್ "ಗಬ್ಬಾನ". ಕಳೆದ ಮೂವತ್ತು ವರ್ಷಗಳಿಂದ ಅಮಿತಾಭ್'ರ ಸೂಟ್'ಗಳನ್ನು ವಿನ್ಯಾಸ ಮಾಡಿ ತಯಾರಿಸಿ ಕೊಡುತ್ತಿರುವವರು ಇದೇ ಕಂಪನಿಯವರು.
28) ಅಮಿತಾಭ್'ರ ಸೂಟ್ ತಯಾರಿಕೆಗೆ ಬಳಸುವ ಬಟ್ಟೆಯನ್ನು ಇಟಲಿಯಿಂದ, ದಾರವನ್ನು ಫ್ರಾನ್ಸ್'ನಿಂದ ಮತ್ತು ಗುಂಡಿಗಳನ್ನು ಇಂಗ್ಲೆಂಡ್'ನಿಂದ ತರಿಸಿಕೊಳ್ಳಲಾಗುತ್ತದೆ.
29) ಅಮಿತಾಭ್'ರ ಮತ್ತೊಂದು ನೆಚ್ಚಿನ ಸೂಟ್ ಬ್ರ್ಯಾಂಡ್ ಫ್ರಾಟೆಲ್ಲಿ ರೊಸ್ಸೆಟ್ಟಿ.
30) ಅಮಿತಾಭ್'ರ ಅಚ್ಚುಮೆಚ್ಚಿನ ಕಾರು "ಲೆಕ್ಸಸ್". ಇದು ಬುಲೆಟ್ ಪ್ರೂಫ್'ನಿಂದ ಕೂಡಿದೆ.
31) ಅಮಿತಾಭ್'ರಿಗೆ ವಾಚ್'ಗಳನ್ನು ಸಂಗ್ರಹಿಸುವ ಹವ್ಯಾಸವಿದ್ದು ಅವರು ಒಮ್ಮೆ ಧರಿಸಿದ ವಾಚನ್ನು ಮತ್ತೆ ಧರಿಸುವುದಿಲ್ಲ. ಅವರ ಇಷ್ಟದ ವಾಚ್ ಬ್ರ್ಯಾಂಡ್ "ಲಾಂಜಿನ್ಸ್".
32) ಅಮಿತಾಭ್'ರ ಮತ್ತೊಂದು ಹವ್ಯಾಸ ಎಂದರೆ ಪೆನ್'ಗಳನ್ನು ಸಂಗ್ರಹಿಸುವುದು. ಇದುವರೆಗೂ ಅವರು ಸಾವಿರಾರು ಪೆನ್'ಗಳನ್ನು ಸಂಗ್ರಹಿಸಿಟ್ಟಿದ್ದಾರೆ. "ಮೊಂಟ್ ಬ್ಲಾಂಕ್" ಕಂಪನಿಯವರು ಪ್ರತಿ ವರ್ಷ ಅಮಿತಾಭ್'ರ ಹುಟ್ಟುಹಬ್ಬದಂದು ಹೊಸ ಮಾದರಿಯ ಪೆನ್ನನ್ನು ಉಡುಗೊರೆಯಾಗಿ ನೀಡುತ್ತಾರೆ.
33) ಅಮಿತಾಭ್'ರ ಇಷ್ಟದ ಪ್ರವಾಸಿ ತಾಣಗಳೆಂದರೆ ಲಂಡನ್ ಮತ್ತು ಸ್ವಿಜರ್ಲ್ಯಾಂಡ್.
34) ಅಮಿತಾಭ್'ರಿಗೆ ಹಿಂದಿ ಚಿತ್ರರಂಗವನ್ನು ಬಾಲಿವುಡ್ ಎಂದು ಕರೆಯುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ.
35) "ಸಾಥ್ ಹಿಂದುಸ್ಥಾನಿ" ಅಮಿತಾಭ್ ಅಭಿನಯದ ಏಕೈಕ ಬ್ಲ್ಯಾಕ್ ಅಂಡ್ ವೈಟ್ ಸಿನೆಮಾ.
36) 1995ರಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ತೀರ್ಪುಗಾರರಲ್ಲಿ ಅಮಿತಾಭ್ ಕೂಡ ಒಬ್ಬರು.
37) ಅಮಿತಾಭ್ ಹೊಂದಿರುವ ಎರಡು ಬಂಗ್ಲೆಗಳ ಹೆಸರು "ಪ್ರತೀಕ್ಷ" ಮತ್ತು "ಜಲ್ಸಾ".
38) ಜಯಾ ಅವರು ಹೆಳುವ ಪ್ರಕಾರ "ಅಮಿತಾಭ್ ಒಂದು ರೀತಿ ಒಂಟಿಜೀವಿ"
39) ಅಮಿತಾಭ್ ಅವರು ಮಧ್ಯಪಾನ ವಿರೋಧಿ.
40) ತಾನು ನಾಯಕನಾಗಿ ಅಭಿನಯಿಸಿದ ಚಿತ್ರದ ರೀಮೇಕ್'ನಲ್ಲಿ ಖಳನಾಯಕನಾಗಿ ಅಭಿನಯಿಸಿದ ಏಕೈಕ ನಟ ಅಮಿತಾಭ್.
41) ಅತ್ಯುತ್ತಮ ನಾಯಕನಟ ಪ್ರಶಸ್ತಿಗಾಗಿ ಅತಿ ಹೆಚ್ಚುಬಾರಿ ನಾಮನಿರ್ದೇಶನಗೊಂಡ ನಟ ಅಮಿತಾಭ್.
42) ಅಮಿತಾಭ್ ಎಂ.ಎ.ನಲ್ಲಿ ಡಬಲ್ ಡಿಗ್ರಿ ಮಾಡಿದ್ದಾರೆ.
43) "ದೀವಾರ್" ಮತ್ತು "ಜಂಜೀರ್" ಚಿತ್ರದಲ್ಲಿನ ತಮ್ಮ ಅಭಿನಯದಿಂದಾಗಿ ಅಮಿತಾಭ್ "ಆ್ಯಂಗ್ರಿ ಯಂಗ್ ಮ್ಯಾನ್" ಎಂಬ ಹೆಸರು ಪಡೆದರು.
44) ಅತಿಹೆಚ್ಚು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ನಾಯಕನಟ) ಪಡೆದ ಮೂವರು ನಟರಲ್ಲಿ ಅಮಿತಾಭ್ ಕೂಡ ಒಬ್ಬರು.( ಉಳಿದಿಬ್ಬರು ಕಮಲ್ ಹಾಸನ್ ಮತ್ತು ಮುಮ್ಮಟ್ಟಿ).
45) ಆನಂದ್ ಚಿತ್ರ ಬಿಡುಗಡೆಯಾದಾಗ ಅಮಿತಾಭ್ ಒಂದು ಪೆಟ್ರೋಲ್ ಬಂಕ್'ನಲ್ಲಿ ಕೆಲಸ ಮಾಡುತ್ತಿದ್ದರು.
46) ಅಮಿತಾಭ್ ಅಭಿನಯದ "ಶೋಲೆ" ಚಿತ್ರ ಆಗಿನ ಕಾಲಕ್ಕೆ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಹಣಗಳಿಸಿದ ಚಿತ್ರ. (US$ 60 ಮಿಲಿಯನ್). ಬಿಬಿಸಿಯು ಈ ಚಿತ್ರವನ್ನು "ಫಿಲ್ಂ ಆಫ್ ದಿ ಮಿಲೇನಿಯಮ್" ಎಂದು ಘೋಷಿಸಿದೆ.
47) ಅಮಿತಾಭ್'ರ "ದೀವಾರ್" ಚಿತ್ರಕ್ಕೆ "ಫಿಲ್ಂಫೇರ್ ಬೆಸ್ಟ್ ಫಿಲ್ಂ ಆಫ್ 50 ಈಯರ್ಸ್" ಪ್ರಶಸ್ತಿಯನ್ನು ನೀಡಲಾಗಿದೆ.
48) 8ನೇ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹೆಚ್.ಎನ್.ಬಹುಗುಣ ಅವರ ವಿರುದ್ಧ ಅಲಹಾಬಾದ್'ನಲ್ಲಿ ಸ್ಪರ್ಧಿಸಿ ಶೇ.68.2ರಷ್ಟು ಅಧಿಕ ಬಹುಮತಗಳಿಸುವುದರ ಮೂಲಕ ವಿಜಯಿಯಾಗಿದ್ದರು.
49) ಅಮಿತಾಭ್ ಬಚ್ಚನ್ ಅವರು ಕಾಫಿ ಮತ್ತು ಟೀ ಕುಡಿಯುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಧೂಮಪಾನದಿಂದ ದೂರವಿರಲು ಬಯಸುತ್ತಾರೆ. ಸಿಹಿ ಪದಾರ್ಥಗಳನ್ನು ಇಷ್ಟಪಡುವುದಿಲ್ಲ.
50) ಅಮಿತಾಭ್ ಅವರು ತಮ್ಮ ಮೊಬೈಲ್ ಮತ್ತು ಲ್ಯಾಪ್'ಟಾಪ್ ಅನ್ನು ಬಿಟ್ಟಿರುವುದಿಲ್ಲ.
51) ಅಮಿತಾಭ್ ಅವರು ಬ್ಲಾಗಿಂಗ್'ನಲ್ಲಿ ತುಂಬಾ ಆಸಕ್ತಿ ಹೊಂದಿದ್ದು. ತಮ್ಮ ಬ್ಲಾಗ್ ಮತ್ತು ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಬೆರೆಯಲು ಇಷ್ಟಪಡುತ್ತಾರೆ.
52) ಅಮಿತಾಭ್ ಅವರು ಮೊದಲು ಖರೀದಿಸಿದ ಕಾರು ಸೆಕೆಂಡ್ ಹ್ಯಾಂಡ್ ಫಿಯೆಟ್.
53) ಭಾರತದ ಹಾಸ್ಯ ಪುಸ್ತಕ "ಸುಪ್ರೀಮೊ" ಅಮಿತಾಭ್ ಅವರನ್ನು ಆಧರಿಸಿ ಬರೆದದ್ದಾಗಿದೆ.
54) ದೇವರು (ಗಾಡ್ ತುಸ್ಸೀ ಗ್ರೇಟ್ ಹೋ), ಭೂತ (ಭೂತನಾಥ್, ಡೆಲ್ಲಿ-6) ಮತ್ತು ಜೆನೀ (ಅಲಾದ್ದೀನ್) ಈ ಮೂರೂ ಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ನಟ ಅಮಿತಾಭ್.
55) ಅಮಿತಾಭ್ ಅವರು ನಾಯಕನಟನಾಗಲು ಪ್ರೇರಣೆಯಾಗಿದ್ದು ಅವರ ತಾಯಿ ತೇಜಿ ಬಚ್ಚನ್.
56) ಅಮಿತಾಭ್'ರಿಗೆ ಇಷ್ಟವಾದ ಕೋಟ್, " ಪ್ರತಿಯೊಬ್ಬರೂ ಸಿನೆಮಾ ನೋಡುತ್ತಾರೆ ಆದರೆ ಪ್ರತಿಯೊಬ್ಬರೂ ಪುಸ್ತಕ ಓದಲು ಸಾಧ್ಯವಿಲ್ಲ".