Friday, 4 July 2014

ಏಳು - ಬೀಳು


ರಾಗ - ತಾಳವಿಲ್ಲದೆ ಸಾಹಿತ್ಯ ಇರೋಕೆ ಸಾಧ್ಯಾನಾ?
ಉಪ್ಪು - ಖಾರ ಇಲ್ಲದ ಅಡಿಗೆ ತಿನ್ನೋಕೆ ಕಷ್ಟಾನೆ!
ಏಳು - ಬೀಳು, ಸೋಲು - ಗೆಲುವು ಇದ್ದರೆ ಜೀವನ
ಭೂಮಿ ಮೇಲೆ ನಮಗಿರುವುದು ಸಾವೊಂದೆ ಕೊನೆ...!

ಇದು ಮೂರು ದಿನದ ಬಾಳು, ಎಂದಿಗೂ ನೀ ನಗುತಿರು
ನಿನಗಾಗುವ ಅನುಭವವೆ ನಿನ್ನ ನಿಜವಾದ ಗುರು
ಬದುಕೊದು ಕಲಿಸೋಕೆ ಇಲ್ಲಿ ನಮಗ್ಯಾರು ಇಲ್ಲ
ಈ ಬಾಳಿನ ರಹಸ್ಯಾನ ದೇವನೊಬ್ಬನೆ ಬಲ್ಲ

ಸೋಲೇ ಗೆಲುವಿನ ಮೆಟ್ಟಿಲು ಇದ ನೀ ಮರೆಯದಿರು
ಗೆಲುವು ಬಂದಾಗ ನೀ ಕಣ್ಮುಚ್ಚಿ ಕೂರದಿರು
ಸಾಧನೆಗೆ ಬೇಕು ಆತ್ಮವಿಶ್ವಾಸದ ಬಲ
ಸನ್ಮಾರ್ಗದೆಡೆಗೆ ಇರಲಿ ನಿನ್ನೆಲ್ಲಾ ಹಂಬಲ

ಕಷ್ಟದಲ್ಲಿ ಬೆಯುತಿರುವ ಜನರ ದನಿಯಾಗು ನೀ
ಕಿತ್ತು ತಿನ್ನೋ ರಾಕ್ಷಸರಿಗೆ ಯಮಪಾಶವಾಗು ನೀ
ದುಡಿವುದೇ ಜೀವನ, ನಿಜ ಸುಖವು ಅಲ್ಲಿದೆ
ಹೆಣ್ಣು - ಹೊನ್ನು - ಮಣ್ಣಿನಲ್ಲೇ ನಾಶ ಅಡಗಿದೆ

ನಮ್ಹೊಟ್ಟೆ ತುಂಬಿಸುವುದು ರೈತನ ಬೆವರಹನಿ
ನಮ್ಮನ್ನು ರಕ್ಷಿಸುತ್ತಿರುವುದು ಯೋಧನ ನೆತ್ತರ ಹನಿ
ನಮ್ಮಿಂದಾಗುದು ಎಂದು ಎಲ್ಲಾ ಕೈಕಟ್ಟಿ ಕುಳಿತರೆ
ದೇಶದ ತುಂಬೆಲ್ಲಾ ಹರಡುವರು ಬರೀ ಭ್ರಷ್ಟರೇ

ಈ ಭೂತಾಯಿಯ ರಕ್ಷಣೆ ನಮ್ಮೆಲ್ಲರ ಹೊಣೆ
ನಮ್ಮ ಒಗ್ಗಟ್ಟಿನ ಬಲಕೆ ಎಂದೂ ಇಲ್ಲಾ ಕೊನೆ
ಬನ್ನಿ ಒಟ್ಟಾಗಿ ದುಡಿಯೋಣ ನಮ್ಮ ಸರ್ವೋದಯಕೆ
ಭೂಮಿಯ ಮೇಲಿನ ಶಾಂತಿ - ನೆಮ್ಮದಿಯೇ ಆ ದೇವರ ಬಯಕೆ

No comments:

Post a Comment