ಕಣ್ಣಂಚಲಿ ಹನಿ ಮೂಡಿದೆ
ಹೃದಯ ಬಿಕ್ಕಿ ಅಳುತಿದೆ
ಕನಸಿಗೆ ಕಾರ್ಮೋಡ ಕವಿದಿದೆ
ಮನಸೀಗ ಒಡೆದ ಕನ್ನಡಿಯಾಗಿದೆ
ಪ್ರತಿಯೊಂದು ಬಿಂಬ ನನ್ನ ನೋಡಿ ನಗುತಿರಲು
ಕೂಡಿಟ್ಟ ಕನಸು ಒಂದೊಂದೆ ಮರೆಮಾಚುತಿರಲು
ಓ ಜೀವವೇ ಕೂಗಿ
ಕರೆದರೂ ಏಕೆ ದೂರಾದೆ ನೀ
ಈ ಶ್ವಾಸವೇ ನಿನಗಾಗಿ
ತಿಳಿದಿದ್ದರೂ ತೊರೆದೆಯಾ ನೀ
ಹೊರಗೆ ಮಾತು ನೂರಿದ್ದರು
ಒಳಗೆ ಏಕಾಂತದಿ ಕಾಡುವ ಮೌನ
ಜಗದೆದುರು ವಿಧೂಷಕನಂತಿದ್ದರು
ಗುಂಡಿಗೆಯ ಗೂಡೊಳಗೆ ನೋವಿನ ನರ್ತನ
ನಿರಾಸೆಯ ಕಾರ್ಮೋಡ ಸರಿದು
ಸಂತೋಷದ ಬೆಳಕು ಹರಿವುದೆಂತು
ಬಯಕೆಗಳ ಬತ್ತಳಿಕೆ ಕೈಲಿ ಹಿಡಿದು
ಕಾಯುತಿರುವೆ ಭರವಸೆಯಲಿ ನಿಂತು