Monday, 19 September 2016

ಕುಪ್ಪಳ್ಳಿ

ಚಲಿಸುವ ಮೋಡಗಳ ದಿಬ್ಬಣದಲಿ
ಕಾನನದ ಹಸಿರ ರಾಶಿ ಸಿರಿಯಲಿ
ತಂಪು ಸೂಸುವ ಗಾಳಿಯಲಿ
ಕಂಗೊಳಿಸುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ನಾಟಿ ಪೈರಿನ ನಾಟ್ಯದಲಿ
ಬೆಟ್ಟ-ಗುಡ್ಡಗಳ ಘಾಟಿಯಲಿ
ಕಲ್ಲನ್ನು ಕವಿಯಾಗಿಸುವ ಧಾಟಿಯಲಿ
ಕೆಣಕುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಸೂರ್ಯ ಕಿರಣಗಳ ಹೊಳಪಿನಲಿ
ಹಾರೋ ಹಕ್ಕಿಗಳ ಚಿಲಿಪಿಲಿಯಲಿ
ಹರಿವ ಝರಿಯ ಬಳುಕಿನಲಿ
ಸೆಳೆಯುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಸುರಿವ ಸೊನೆಯ ಸದ್ದಿನಲಿ
ಕೊರೆವ ಮಂಜಿನ ಇಬ್ಬನಿಯಲಿ
ಮಧುವಣಗಿತ್ತಿಯಂತೆ ಸಿಗ್ಗಿನಲಿ
ನಲಿಯುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಕವಿಮನೆಯ ಸ್ಫೂರ್ತಿ ನೆಲೆಯಲಿ
ಸವಿಗಾನದ ಇಂಪಿನ ಅಲೆಯಲಿ
ಸಿಲುಕಿದೆ ನಾನು ಪ್ರೀತಿ ಸೆಲೆಯಲಿ
ಮನಸೋತು ಶರಣಾದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಶಿಲೆಗಳೂ ನುಡಿಯುವ ಕವಿಶೈಲದಲಿ
ತನು-ಮನಗಳೆರಡು ಅರಳಿ
ಹೊಸ ಸೊಗಸೊಂದ ಕಂಡೆ ನಾನಿಲ್ಲಿ
ಹೇಗೆ ಮರೆಯಲಿ ನಿನ್ನ ಕುಪ್ಪಳ್ಳಿ
ನೋಡಲು ಬರುವೆ ನಿನ್ನ ಮರಳಿ ಮರಳಿ

No comments:

Post a Comment