ಒಂದು ಪಕ್ಷಿಯು ಚಳಿಗಾಲದ
ತಣ್ಣನೆಯ ಅನುಭವವನ್ನು ಪಡೆಯಲು ತನ್ನ ಗೂಡಿನಿಂದ ಹೊರಬಂದು ಆಕಾಶದಲ್ಲಿ ಹಾರಲು ಪ್ರಾರಂಭಿಸಿತು. ಸ್ವಲ್ಪ
ಸಮಯದ ನಂತರ ಚಳಿಯು ಹೆಚ್ಚಾದ ಕಾರಣ ಪಕ್ಷಿಯ ಮೈಯೆಲ್ಲಾ ಹೆಪ್ಪುಗಟ್ಟಿ ಹಾರಲಾಗದೆ ನೆಲದ ಮೇಲೆ ಬಿದ್ದಿತು.
ಪಕ್ಷಿಯು ಅಲ್ಲೇ ಬಿದ್ದಿರುವಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಹಸು ಅದರ ಮೇಲೆ ಸಗಣಿ ಹಾಕಿತು.
ಬಿಸಿ ಸಗಣಿಯ ಬೆಚ್ಚನೆಯ ಅನುಭವವು ಪಕ್ಷಿಗೆ ಎಚ್ಚರವಾಗುವಂತೆ ಮಾಡಿತು. ಆ ಹಿತಾನುಭವದಿಂದ ಖುಷಿಯಾದ
ಪಕ್ಷಿಯು ಅಲ್ಲೇ ಸ್ವಲ್ಪ ಸಮಯವನ್ನು ಕಳೆಯಲು ನಿರ್ಧರಿಸಿ ಸಂತೋಷದಿಂದ ಹಾಡಲಾರಂಭಿಸಿತು. ಅಲ್ಲೇ ದೂರದಲ್ಲಿದ್ದ
ಒಂದು ಬೆಕ್ಕಿನ ಕಿವಿಗೆ ಆ ಹಾಡು ಬೀಳುತ್ತದೆ. ಹಾಡಿನ ಧ್ವನಿಯನ್ನೇ ಹಿಂಭಾಲಿಸಿಕೊಂಡು ಬಂದ ಬೆಕ್ಕು
ಆ ಪಕ್ಷಿಯನ್ನು ಸಗಣಿಯಿಂದ ಮೇಲಕ್ಕೆತ್ತಿ ತಿಂದು ಹಾಕಿತು.
ಕಥೆಯ ನೀತಿಗಳು
1) ನಿಮಗೆ ಕಿರಿಕಿರಿ ಉಂಟುಮಾಡುವವರೆಲ್ಲರೂ ನಿಮಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ ಎಂದಲ್ಲ.
2) ನಿಮಗೆ ಸಹಾಯ ಮಾಡುವವರೆಲ್ಲರೂ ನಿಮಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದಲ್ಲ.
3) ಕೊನೆಯದಾಗಿ, ನೀವು ತುಂಬಾ ಆಳವಾದ ತೊಂದರೆಯಲ್ಲಿರುವಾಗ ಬಾಯ್ಮುಚ್ಚಿಕೊಂಡಿರುವುದು ಬಹಳಾ ಒಳ್ಳೆಯದು.