Friday, 19 September 2014

ಬಾಸ್'ಗೆ ಮೊದಲು ಮಾತಾಡಲು ಬಿಡಿ...!

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್ ರೆಪ್ರೆಸೆಂಟೇಟಿವ್, ಅಡ್ಮಿನಿಸ್ಟ್ರೇಶನ್ ಕ್ಲರ್ಕ್ ಮತ್ತು ಮ್ಯಾನೇಜರ್ ಮೂವರು ಒಂದು ದಿನ ಮಧ್ಯಾಹ್ನ ಊಟಕ್ಕಾಗಿ ಹೋಗುತ್ತಿರುವಾಗ ಮಧ್ಯ ದಾರಿಯಲ್ಲಿ ಅವರಿಗೊಂದು ತುಂಬಾ ಹಳೆಯ ಕಾಲದ ಎಣ್ಣೆ ದೀಪವೊಂದು ಸಿಗುತ್ತದೆ. ಆ ದೀಪವನ್ನು ನೋಡಿದೊಡನೆ ಅವರೆಲ್ಲರಿಗೂ ಅಲಾದ್ದಿನ್ ಕಥೆ ನೆನಪಾಗಿ ಕಥೆಯಲ್ಲಾದಂತೆ ಈ ದೀಪದಿಂದಲೂ ಸಹ ಜೆನೀ ಬರಬಹುದೆಂದು ಊಹಿಸಿ ಅದನ್ನು ಜೋರಾಗಿ ಉಜ್ಜಲಾರಂಭಿಸುತ್ತಾರೆ. ಅವರಂದುಕೊಂಡಂತೆ ಅದರಿಂದ ಜೆನೀ ಆಚೆ ಬಂದು, "ನಾನು ನಿಮ್ಮೆಲ್ಲರ ಒಂದೊಂದು ಆಸೆಯನ್ನು ಈಡೇರಿಸುತ್ತೇನೆ. ನಿಮಗೇನು ಬೇಕೋ ಕೇಳಿ" ಎಂದು ಹೇಳುತ್ತದೆ. ಅದರ ಮಾತನ್ನು ಕೇಳುತ್ತಲೇ ಅಡ್ಮಿನಿಸ್ಟ್ರೇಶನ್ ಕ್ಲರ್ಕ್ "ನಾನು ಮೊದಲು! ನಾನು ಮೊದಲು!" ಎನ್ನುತ್ತಾ, "ನಾನು ಬಹಾಮಾಸ್ ದ್ವೀಪಕ್ಕೆ ಹೋಗಿ ಪ್ರಪಂಚದ ಯಾವುದೇ ಗೊಡವೆಗಳಿಲ್ಲದೆ ಸಮುದ್ರದಲ್ಲಿ ತುಂಬಾ ಜೋರಾಗಿ ಸ್ಪೀಡ್ ಬೋಡ್ ಓಡಿಸಲು ಇಷ್ಟಪಡುತ್ತೇನೆ", ಎಂದು ಕೇಳುತ್ತಾನೆ. ಹೀಗೆ ಹೇಳಿದ ತಕ್ಷಣವೇ ಅವನು ಮಾಯವಾಗುತ್ತಾನೆ. "ನೆಕ್ಸ್ಟ್ ನಾನು! ನೆಕ್ಸ್ಟ್ ನಾನು!" ಎನ್ನುತ್ತಲೇ ಸೇಲ್ಸ್ ರೆಪ್ರೆಸೆಂಟೇಟಿವ್, "ನನಗೆ ಹವಾಯೀ ದ್ವೀಪಕ್ಕೆ ಹೋಗಿ ಅಲ್ಲಿನ ಕಡಲತೀರದಲ್ಲಿ ಒಂದು ಸುಂದರ ಯುವತಿಯ ಕೈಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಾ ನನಗಿಷ್ಟವಾದ ಡ್ರಿಂಕ್ಸ್ ಕುಡಿಯಬೇಕೆಂಬ ಆಸೆ", ಎನ್ನುತ್ತಲೇ ಅವನು ಕೂಡ ಮಾಯವಾಗುತ್ತಾನೆ. ಆಗ ಜೆನೀಯೂ ಮ್ಯಾನೇಜರ್'ಗೆ,"ಈಗ ನಿನ್ನ ಸರದಿ, ನಿನಗೇನು ಬೇಕೋ ಕೇಳು" ಎನ್ನುತ್ತದೆ. ಆಗ ಮ್ಯಾನೇಜರ್,"ಊಟದ ನಂತರ ಅವರಿಬ್ಬರೂ ಆಫೀಸ್'ನಲ್ಲಿ ಇರಬೇಕು" ಎನ್ನುತ್ತಾನೆ.


ಕಥೆಯ ನೀತಿ:- "ಯಾವಾಗಲೂ ನಿಮ್ಮ ಬಾಸ್'ಗೆ ಮೊದಲು ಮಾತನಾಡಲು ಬಿಡಿ"

No comments:

Post a Comment