Thursday 29 September 2016

ವಿಧೂಷಕ

ಕಣ್ಣಂಚಲಿ ಹನಿ ಮೂಡಿದೆ
ಹೃದಯ ಬಿಕ್ಕಿ ಅಳುತಿದೆ
ಕನಸಿಗೆ ಕಾರ್ಮೋಡ ಕವಿದಿದೆ
ಮನಸೀಗ ಒಡೆದ ಕನ್ನಡಿಯಾಗಿದೆ

ಪ್ರತಿಯೊಂದು ಬಿಂಬ ನನ್ನ ನೋಡಿ ನಗುತಿರಲು
ಕೂಡಿಟ್ಟ ಕನಸು ಒಂದೊಂದೆ ಮರೆಮಾಚುತಿರಲು
ಜೀವವೇ ಕೂಗಿ ಕರೆದರೂ ಏಕೆ ದೂರಾದೆ ನೀ
ಶ್ವಾಸವೇ ನಿನಗಾಗಿ ತಿಳಿದಿದ್ದರೂ ತೊರೆದೆಯಾ ನೀ

ಹೊರಗೆ ಮಾತು ನೂರಿದ್ದರು
ಒಳಗೆ ಏಕಾಂತದಿ ಕಾಡುವ ಮೌನ
ಜಗದೆದುರು ವಿಧೂಷಕನಂತಿದ್ದರು
ಗುಂಡಿಗೆಯ ಗೂಡೊಳಗೆ ನೋವಿನ ನರ್ತನ

ನಿರಾಸೆಯ ಕಾರ್ಮೋಡ ಸರಿದು
ಸಂತೋಷದ ಬೆಳಕು ಹರಿವುದೆಂತು
ಬಯಕೆಗಳ ಬತ್ತಳಿಕೆ ಕೈಲಿ ಹಿಡಿದು
ಕಾಯುತಿರುವೆ ಭರವಸೆಯಲಿ ನಿಂತು

Wednesday 21 September 2016

ಬೇಕಿದ್ರೆ ಓದ್ಕೊಳಿ

ಮಾಡೋಕ್ ಸದ್ಯಕೆ ಏನೂ ಕ್ಯಾಮೆ ಇಲ್ಲ
ಏನು ಮಾಡೋದೋ ತಲೆಗೆ ಹೊಳಿತಿಲ್ಲ
ಸಾಕಾಯ್ತು ನಂಗೂ ಸುಮ್ನೆ ಕುಂತು ಕುಂತು
ಮಳೆ ಗಾಳಿಗೆ, ಇದ್ದ ಪವರ್ ಕೂಡ ಹೋಯ್ತು

ಹೋದ್ರೆ ಹೋಯ್ತು ಎಷ್ಟು ಅಂತ ನೋಡೊದು ಟಿವಿನಾ
ಅದು ಬಡ್ಕೊಳೋದು ಕೇಳಿ ಕಚ್ದಂಗ್ ಆಗ್ತಿತ್ತು ಕಿವಿನಾ
ಬೆಳಗ್ಗೆ ಎದ್ರೆ ದಿನಭವಿಷ್ಯ ಹೇಳೋರ್ ಕಾಟ
ಸಂಜೆ ಆದ್ರೆ ಸೀರಿಯಲ್ ಅನ್ನೋ ದೊಂಬರಾಟ

ವಾರ ಪೂರ್ತಿ ಇವರ್ದು ಇದೇ ಗೋಳು
ನ್ಯೂಸ್ ಅಲ್ಲಿ ಬಿಡೋದ್ ಬರೀ ಓಳು
ಈ ಓಳು-ಗೋಳಿಗೆ ಯಾವ್ದೆ ಮಿತಿ ಇಲ್ಲ
ಆದ್ರೂ ನೋಡ್ಲೇಬೇಕು ಬೇರೆ ಗತಿ ಇಲ್ಲ

ಇನ್ನೂ ಹಿಂಗೆ ಹುಚ್ಚುಚ್ಚಾಗಿ ಬರಿತಾ ಹೋದ್ರೆ
ಓದೋರು ಕರೆದು ಕೆರದಲ್ಲಿ ಹೋಡಿತಾರೆ
ನಂಗ್ಯಾಕ್ ಬೇಕು ಇವರ ಉಸಾಬರಿ
ಮಲಗಿ ನಿದ್ದೆ ಮಾಡುವೆ ಕಣ್ಣುಉರಿ

ಬಾಯಿಗ್ ಬಂದಿದ್ದು

ಅಕ್ಟೋಬರ್ ಆದರೆ ನೆಕ್ಸ್ಟು ನವೆಂಬರ್ರು
ಅದೇನೇ ನೋವಿದ್ರು ಸುಮ್ನೆ ನಗ್ತಾ ಇರೂ
ಡಿಸೆಂಬರ್ ಕಳೆದರೆ ಹೊಸ ಜನವರಿ
ಹಳೆ ನೋವಿಗೆ ಮಾಡ್ಕೊಬೇಡ ವರಿ

ವರ್ಷಕ್ಕೆ ಸಾಲುತಿಲ್ಲ ಹನ್ನೆರಡು ಮಂತು
ಕಟ್ಟಿ ಕಟ್ಟಿ ಸಾಕಾಯ್ತ ಸಾಲದ ಕಂತು
ವೀಕೆಂಡ್ ಬರೀ ಸಾಟರ್ಡೇ ಸಂಡೇ
ಮಧ್ಯೇ ಬೇಕು ಎಕ್ಸಟ್ರಾ ಒನ್ ಡೇ

ಬೆಳಗ್ಗೆ ಎದ್ರೆ ಫೇಸ್ಬುಕ್ಕು ವಾಟ್ಸ್ಯಾಪು
ಅಡಿಗೆಗೆ ಬೇಕೇ ಬೇಕು ಉಪ್ಪು
ಕಾಗೆಯ ಬಣ್ಣ ಕಡು ಕಾಡಿಗೆ ಕಪ್ಪು
ಯಾರಿಗೂ ಗೊತ್ತಿಲ್ಲ  ಯಾವ್ದು ಸರಿ-ತಪ್ಪು

ಅದೆಷ್ಟೇ ಮಾಡಿದ್ರು ಕುಂತು ಚಿಂತೆ
ಎಲ್ರುದೂ ಬರೀ ಅದೇ ಅಂತೆ ಕಂತೆ
ಹೇಳೋರ್ ಕಮ್ಮಿ ಇಲ್ಲಿ ಇದ್ದಿದ್ ಇದ್ದಂತೆ
ಜಗವಿದು ದೊಡ್ಡ ಹುಚ್ಚರ ಸಂತೆ

Monday 19 September 2016

ಕುಪ್ಪಳ್ಳಿ

ಚಲಿಸುವ ಮೋಡಗಳ ದಿಬ್ಬಣದಲಿ
ಕಾನನದ ಹಸಿರ ರಾಶಿ ಸಿರಿಯಲಿ
ತಂಪು ಸೂಸುವ ಗಾಳಿಯಲಿ
ಕಂಗೊಳಿಸುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ನಾಟಿ ಪೈರಿನ ನಾಟ್ಯದಲಿ
ಬೆಟ್ಟ-ಗುಡ್ಡಗಳ ಘಾಟಿಯಲಿ
ಕಲ್ಲನ್ನು ಕವಿಯಾಗಿಸುವ ಧಾಟಿಯಲಿ
ಕೆಣಕುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಸೂರ್ಯ ಕಿರಣಗಳ ಹೊಳಪಿನಲಿ
ಹಾರೋ ಹಕ್ಕಿಗಳ ಚಿಲಿಪಿಲಿಯಲಿ
ಹರಿವ ಝರಿಯ ಬಳುಕಿನಲಿ
ಸೆಳೆಯುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಸುರಿವ ಸೊನೆಯ ಸದ್ದಿನಲಿ
ಕೊರೆವ ಮಂಜಿನ ಇಬ್ಬನಿಯಲಿ
ಮಧುವಣಗಿತ್ತಿಯಂತೆ ಸಿಗ್ಗಿನಲಿ
ನಲಿಯುತಿದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಕವಿಮನೆಯ ಸ್ಫೂರ್ತಿ ನೆಲೆಯಲಿ
ಸವಿಗಾನದ ಇಂಪಿನ ಅಲೆಯಲಿ
ಸಿಲುಕಿದೆ ನಾನು ಪ್ರೀತಿ ಸೆಲೆಯಲಿ
ಮನಸೋತು ಶರಣಾದೆ ಕುಪ್ಪಳ್ಳಿ
ನಿನ್ನ ನೋಡಲು ಬರುವೆ ಮರಳಿ

ಶಿಲೆಗಳೂ ನುಡಿಯುವ ಕವಿಶೈಲದಲಿ
ತನು-ಮನಗಳೆರಡು ಅರಳಿ
ಹೊಸ ಸೊಗಸೊಂದ ಕಂಡೆ ನಾನಿಲ್ಲಿ
ಹೇಗೆ ಮರೆಯಲಿ ನಿನ್ನ ಕುಪ್ಪಳ್ಳಿ
ನೋಡಲು ಬರುವೆ ನಿನ್ನ ಮರಳಿ ಮರಳಿ

Tuesday 2 August 2016

ನಿನ್ನಾಣೆ ನಿನ್ನಾಣೆ

Movie: Suntaragali
Release Date: 17/02/2006
Song: Ninnane Ninnane
Director: Sadhu Kokila
Music: Sadhu Kokila
Singer: Kunal Ganjawala, Chitra
Lyrics: Ranganath
Cast: Darshan Thoogudeepa, Rakshitha, Rangayana Raghu, Umashree


ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ

ಗೆಳೆಯಾ… ನನಗೂನೂ… ನಿನೊಬ್ಬನೆ
ನಿನ್ನ ಹೃದಯಾನೆ… ನನ್ನ ಮನೆ

ಕೋಟಿ ದೇವರ ನಾ ಕಾಣೆ… ಪ್ರೀತಿ ದೇವರ ಮೇಲಾಣೆ…
ಎಲ್ಲ ದೇವರ ಮೂಲಾನು… ಪ್ರೀತಿ ಮಂತ್ರ ತಾನೆ…

ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ

ಈ ಪ್ರೀತಿಯ ರಥದಲ್ಲಿ… ಹೊರಡೊ ಮೆರವಣಿಗೇಲಿ…
ನಮ್ಮಿಬ್ಬರಿಗೆ ತಾನೆ ಅವಕಾಶ
ಈ ಪ್ರೀತಿಯ ಪುಟದಲ್ಲಿ… ಬರೆಯೋ ಬರವಣಿಗೇಲಿ…
ನಮ್ಮಿಬ್ಬರದೆ ತಾನೆ ಇತಿಹಾಸ

ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ…
ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ…

ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ

ಹಾರೋ ಹಕ್ಕಿನೆ… ಹರಿದಾಡೋ ಹೊಳೆಯನ್ನೆ…
ಕವಿತೇಲಿ ಕಟ್ಟಿ ಹಾಕೊದ್ ಪ್ರೀತಿನೇ
ತೇಲೋ ಮೊಡನೆ… ಕರಗಿ ಬೀಳೋ ಮಳೆಯನ್ನೆ…
ಮುತ್ತಿ ಸುತ್ತ ಭೂಮಿ ಮಾಡೊದು ಪ್ರೀತಿನೇ

ಗುರುವಿಲ್ಲದಿದ್ದರು ಕಲಿಯೊದು
ಗುರಿಯಿಲ್ಲದಿದ್ದರು ಚಲಿಸೊದು
ಅರಿವಿಲ್ಲದಂತೆಯೆ ಸೆಳೆಯೊ ಸೆಳೆತ ಈ ಪ್ರೇಮ

ಜಪವಲ್ಲದಿದ್ದರು ಬೇಡೊದು
ಜ್ವರವಲ್ಲದಿದ್ದರು ಕಾಡೊದು
ಸ್ವರವಿಲ್ಲದಿದ್ದರು ಹಾಡೋ ಹಾಡು ಈ ಪ್ರೇಮ

ಕಾಣದಿದ್ದರು… ಕೇಳದಿದ್ದರು…
ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ

ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ನೀನಿಲ್ದೆ ನಾನಿಲ್ಲ ದೇವರಾಣೆ
ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
ಈ ಜೀವ ಎಂದೆಂದು ನಿನ್ನದೇನೆ

ಗೆಳೆಯಾ… ನನಗೂನೂ… ನಿನೊಬ್ಬನೆ
ನಿನ್ನ ಹೃದಯಾನೆ… ನನ್ನ ಮನೆ

ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ…
ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ…

Sunday 31 July 2016

ಸೊಕ್ಕಿನಲಿ ಮೆರೆಯದಿರು ಸಿದ್ಧು

ಯಾರು ತಿಳಿಯರು ನಿನ್ನ ಅಹಿಂದವಾದದ ಧರ್ಮ
ಸದನದೋಳ್ ತೋಳ್ ತಟ್ಟಿದ ನಿನ್ನ ಭಂಡ ಪರಾಕ್ರಮ
ಎಲ್ಲೇ ಹೋದರು ಬೆಂಬಿಡದು ಮಾಡಿದ ಪಾಪಗಳ ಕರ್ಮ

ನಿನ್ನೆಲ್ಲಾ ಸುಖಭೋಗಗಳಿಗೆ ಕಾರಣ ಪ್ರಜೆಗಳು ನೀಡಿದ ಮತ
ಹಗಲಿರುಳು ತಲೆಗಳು ಉರುಳುತ್ತಿದ್ದರೂ ನಿದ್ದೆ ಮಾಡುತ
ದರ್ಪದಿಂದ ಮೆರೆಯುತಿರುವ ಮುಖ್ಯಮಂತ್ರಿ ಸಿದ್ದಣ್ಣ
ನ್ಯಾಯ ಕೇಳುವವರಿಗೆ ಕೊಟ್ಟೆ ಲಾಠಿ ಏಟಿನ ಬಹುಮಾನ

ಜಾತ್ಯಾತೀತ ಶೂರ ನೀ ಅಹಿಂದ ಬಲನೋ
ಹೈಕಮಾಂಡ್’ನೊಡನೆ ಹೋರಾಡಿ ಪದವಿಯಂ ಪಡೆದವನೋ
ರಾಜ್ಯದೊಳೆದುರಾಗೊ ತೊಂದರೆಗಳನ್ ನಿಗ್ರಹಿಸಲಾಗದೆ ಓಡಿದವನೋ
ಅಧಿಕಾರದಾಹೀ

ಅತ್ಯಾಚಾರದ ಚರ್ಚೆ ನಡೆವಾಗ ತೂಕಡಿಸುತ್ತಿದ್ದ ಶೂರೀ
ಲೋಕಾಯುಕ್ತ ಮುಚ್ಚಿಸಿ ಭ್ರಷ್ಟರನು ರಕ್ಷಿಸಿದ ಭ್ರಷ್ಟಾ ನೀನು
ಪ್ರಾಮಾಣಿಕರ ಸಾವಿಗೆ ನ್ಯಾಯ ಕೊಡಿಸದೆ ಅಡಿಗಡಿಗವರ ನಿಂದಿಸಿದ ಕ್ರೂರೀ

ಇನ್ನೂ ಮುಖ್ಯಮಂತ್ರಿಯಾಗಿರುವ ಅರ್ಹತೆ ನಿನಗೆಲ್ಲೋ
ಇನ್ನೆರಡು ವರ್ಷಗಳಿವೆ
ಇನ್ನಾದರೂ ಚೂರಾದರೂ ಬದಲಾಗೋ

ಕಾಗೆಯೊಂದಾರಿ ಬಂದು ಕೂತಿದ್ದಕ್ಕೆ ಕಾರು ಬದಲಿಸಿದ ಮೂಢ
ಮಕ್ಕಳ್ಹೋಗೋ ಕಲಿಕೆ ಪ್ರವಾಸದಲೂ ಜಾತಿ ತರಲೆತ್ನಿಸಿದ ಪ್ರಚಂಡ
ಸರ್ಕಾರದ ಸಕಲ ಯೋಜನೆಯಲೂ ಮೀಸಲಾತಿ ತಂದಿಟ್ಟ ಭಂಡ
ಬೇಕಿಲ್ಲದ ಭಾಗ್ಯಗಳನು ಕರುಣಿಸಿ ಖಜಾನೆ ಖಾಲಿ ಮಾಡಿದ ಪುಂಡ

ಅಹಿಂದನೋ ಮೂಢನೋ ಜಾತ್ಯಾತೀತನೋ ನಿರ್ಧರಿಸುವುದು ನಾವ್ ಮಾಡುವ ಕಾರ್ಯ
ಊರುಗಳೆಲ್ಲಾ ಬಾರುಗಳಾಗುವ ಮೊದಲು ಎಚ್ಛೆತ್ತುಕೊ ಸಿದ್ಧರಾಮಯ್ಯ

ಚರಿತ್ರೆಯೊಳ್ ಉಳುವವರ ಕೆಣಕಿ ಉಳಿದವರಿಲ್ಲ
ನಿನ ಅಂಹಹಾರವೇ ನಿನಗೆ ಮುಳುವಾಗುವ ದಿನ ದೂರವಿಲ್ಲ
ನಿನ್ನೆಲ್ಲಾ ಹುಚ್ಚಾಟಕೆ ಬೆಂದು ಬೇಸತ್ತಿರುವರು ಜನತೆ
ಮೂರು ಕಾಸಿಗೆ ಹರಾಜಾಗುವಂತೆ ಮಾಡಿದೆ ರಾಜ್ಯದ ಘನತೆ

ಅಧಿಕಾರವಿವುದೆಂದು ಸೊಕ್ಕಿನಲಿ ಮೆರೆಯದಿರು ಸಿದ್ಧು
ನೀನೊಂದು ಬಗೆದರೆ ದೈವ ತಾನೊಂದು ಬಗೆವುದು

Wednesday 27 July 2016

ನಿನಗಾಗಿ ಒಂದು ಓಲೆ

ನೀ ಹುಟ್ಟಿದ್ದು ಪೌರ್ಣಮಿಯಲ
ನಿನ್ನ ಹೆಸರು ಬೆಳದಿಂಗಳ
ನಿನ್ನ ನಯನ ನಾಚಿಸುತಿವೆ ತಾರೆಗಳ
ನೀ ನಗುವಲೆ ಸುರಿಸುವೆ ಮುತ್ತುಗಳ
ನಿನ್ನೊಡನೆ ಇದ್ದರೆ ಮನಸು ಮರಿಜಿಂಕೆ
ನಿನ್ನ ಸನಿಹ ತರಿಸಿದೆ ನನ್ನಲ್ಲೂ ನಾಚಿಕೆ
ನೀನಿರಲು ಜೊತೆಯಾಗಿ ಬೇರೆಲ್ಲಾ ಏತಕೆ
ನಿನ್ನ ಸಲುಗೆ ತರಿಸಿದೆ ನನ್ನಲ್ಲೂ ಪ್ರೀತಿ ಬಯಕೆ
ನೀ ನೋಡೋ ಪ್ರತಿ ನೋಟವೆಲ್ಲಾ ನಾನಾಗುವಾಸೆ
ನಿನ್ನ ಕಾಣೋ ಕ್ಷಣಕಾಗಿ ಕುಣಿಯುತಿದೆ ನನ್ನ ಮನಸೇ
ನೀನಾಡೋ ಪ್ರತಿ ಮಾತಲೂ ಹೊಸತೆನೋ ಸೊಗಸು
ನಿನ್ನ ಚಂದ ಕಂಡು ಚಂದ್ರನಿಗೂ ಬಂದಿದೆ ತುಸು ಮುನಿಸು
ನಿನಗಾಗಿಯೇ ಬರೆದಿರುವೆ ಒಲವಿನ ಓಲೆ
ನಿನ ಬಾಳಲಿ ತುಂಬಿರಲಿ ಸಂತೋಷದ ಹೊನಲೆ
ನೀ ನಡೆಯೋ ದಾರಿಯಲಿ ಸುರಿಯುತಿರಲಿ ಹೂಮಳೆ
ನೀನಿರದ ನನ್ನ ಬಾಳು ಇದು ಖಾಲಿ ಬಿಳಿ ಹಾಳೆ

Monday 25 July 2016

ಸಿಂಚನ

ಜೋಕಾಲಿಯಂತೆ ಹಾಯಾಗಿ ತೂಗುತಿರುವೆ
ಇಂದು ನಿನ್ನ ಪ್ರೇಮದ ಮಧುರ ತಂಗಾಳಿಗೆ
ಯಾಕಾಗಿ ಇಷ್ಟು ಅಂತರ ನಮ್ಮ ನಡುವೆ
ಎಂದು ಬರುವುದೋ ಮಿಲನಕೆ ಶುಭಗಳಿಗೆ

ಭೂಮಿಗೆ ತಾಕಿದ ಮೊದಲ ಮಳೆ ಹನಿಯಂತೆ
ಸ್ನೇಹ ಸಿಂಚನ ಝಳಪಿಸಿದೆ ಸೋಕಿ ಮಂಜಿನಂತೆ
ಪುಳಕಿಸುತಿದೆ ಮನದೀ ಏನೋ ಹೊಸ ಕಂಪನ
ಒಳನುಸುಳಿ ನನ್ನ ನಸುನಾಚಿಸಿದೆ ಇಂಪನ

ದಿನ ರಾತ್ರಿ ಸಂದೇಶ ರವಾನೆ ಸಾವಿರಾರು
ಆದರೂ ಉಳಿದಿದೆ ಹೇಳೋಕೆ ಮಾತು ನೂರು
ಯಾರು ಹೆಣೆದರೋ ಕಾಣೆ ನಮ್ಮೀ ಸ್ನೇಹವ
ಬಿಡಿಸಲಾಗದು ಜನ್ಮ ಜನ್ಮದ ಬಂಧವ

ಇದು ಮೊದಲ ಸಲದ ಮಿಲನ

Movie: Majestic
Release Date: 08/02/2002
Song: Idu Modala Salada Milana (Muddu Manase)
Director: P N Sathya
Music: Sadhu Kokila
Singer: Unni Krishnan
Lyrics: Dr. V Nagendra Prasad
Cast: Darshan Thoogudeepa, Rekha, Jai Jagadish, Vanitha Vasu


ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೇ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ಧಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಆತ್ಮಾನ ಗೆಲ್ಲೋ ಚೈತನ್ಯವನ್ನು ಕಂಡೆ
ಆಧ್ಯಾತ್ಮಕಿಂತ ಅತಿಯಾದ ಜ್ಞಾನ ಕಂಡೆ
ಅಕ್ಷರವೇ ಇಲ್ಲದಿರೋ ಪುಸ್ತಕದ ರಾಶಿಯಿದು
ಎಂದೆಂದಿಗೂ ನಿಲ್ಲದಿರೋ ಅಮೃತದ ಸೋನೆಯಿದು
ಎದೆಗೂಡಿನ ಖಾಜಾನವೆ ಒಲವೇ ಗುಟುಕು ನಿನಗೆ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ಧಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಜೋಗುಳದ ಹಾಗೆ ಪರಿಶುದ್ಧವಾದ ಪ್ರೇಮ
ಜೋಪಾನವಾದ ಕನ್ನಡಿಯ ಮಹಲು ಪ್ರೇಮ
ಮುಷ್ಟಿಯಲ್ಲೇ ಸೃಷ್ಟಿಯಿಡೋ ವಿಸ್ಮಯದ ಪ್ರೇಮವಿದು
ದೃಷ್ಟಿಯಲ್ಲೇ ಯಜ್ಞವಿರೋ ಮೌನಗಳ ಮಂತ್ರವಿದು
ಈ ಶ್ವಾಸದ ಆಶ್ವಾಸನೆ ನಿನಗೆ ತಿಳಿಯೇ ಮನಸೇ
ಮುದ್ದು ಮನಸೇ ಪೆದ್ದು ಮನಸೇ
ಬುದ್ಧಿ ಇಲ್ಲದ ಮನಸೇ..
ಸದ್ದು ಮಾಡದೆ ಸುದ್ಧಿ ಮಾಡಿದೆ
ಪ್ರೀತಿ ಬಂದಿದೆ ವಯಸೇ..
ಸೂಚನೆ ನೀಡದೆ ಬರುವುದೇ ಪ್ರೇಮ
ಕುಂತರೂ ನಿಂತರೂ ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ

Friday 20 May 2016

ಸುಮ್ಮನೆ ಮಾತೇಕೆ

ಮುಂಗಾರಿನ ಮಳೆಯ ಮುದಕೆ
ಇಳೆಯ ಬೇಗೆ ಕಳೆದು ಹಸಿರುಟ್ಟಂತೆ
ಮೌನವೇ ಮನಕೆ ಹರುಷ ನೀಡುವಂತೆ
ಕಥೆ ಹೇಳುವಾಗ ಸುಮ್ಮನೆ ಮಾತೇಕೆ

ನಿನ್ನ ಜೊತೆ ನಡೆವಾಗ ದಾರಿಯಲಿ
ತಂಗಾಳಿ ಇರದಿದ್ದರೂ ಏನೋ ಮೈಚಳಿ
ಹಾಯಾದ ಅನುಭವವೊಂದು ಹೃದಯದಲಿ
ಮನೆಮಾಡಿದಂತೆ ನೀನಿದ್ದರೆ ಬಳಿಯಲಿ

ನೀನು ನನಗೆ ಮಾತ್ರ ಎಂಬ ಆಸೆ ಸ್ವಲ್ಪ ಅತಿಶಯ
ನಿನಗೂಂಟೆ ನನ್ನೀ ಹುಚ್ಚು ಕಲ್ಪನೆಯ ಪರಿಚಯ
ಕಣ್ಣುಗಳು ಕಲೆತು ಮಾತನಾಡುವಾಗ ಪ್ರೀತಿ ವಿಷಯ
ಎದೆಯಲಿ ಏನೋ ತಳಮಳ ಕೈಜಾರುವಾಗ ಸಮಯ

ನೀ ನಗುತಿರೇ ನೋಡಲು ನೂರು ಕಣ್ಣು ಸಾಲದು
ಕಿವಿಯಲಿ ಪಿಸುಗುಡುತ ಹೇಳಲೇ ಸಣ್ಣ ಗುಟ್ಟೊಂದು
ನನ್ನ ಪ್ರೀತಿ ನಿನಗೆ ಮಾತ್ರ ಮೀಸಲು ಎಂದೆಂದೂ
ಕನಸಲೂ ನೀ ಸ್ವಲ್ಪ ದೂರಾದರೆ ಸಹಿಸಲು ಆಗದು

Saturday 30 January 2016

ಮೂಕವಿಸ್ಮಿತ

ನಿನ್ನ ಪ್ರೀತಿ ನನಗೆ ಅಚ್ಚರಿಯ ಎಂಟನೆ ಅದ್ಭುತ
ನಿನ್ನ ಸುಂದರ ಚಂದಿರ ಮೊಗವ ನೋಡುತ
ಮಾತು ಮರೆತು ನಾನಾದೆ ಮೂಕವಿಸ್ಮಿತ
ಮನಸುಗಳು ಕಲೆತಿವೆ ಕಣ್ಣಲ್ಲೇ ಮಾತನಾಡುತ
ಕೈ ಬೆರಳುಗಳು ಒಂದನೊಂದು ತಾಕಿ
ನಾ ನಿನ್ನ ನೋಡುತಿರಲು ಕದ್ದು ಇಣುಕಿ
ನೀ ನಸುನಗಲು ನನ್ನ ಕಂಡು ನಾಚಿ
ತಬ್ಬುವಾಸೆ ಎರಡು ತೋಳಲು ಬಾಚಿ
ನೀ ನಗುತಿರಲು ತಾರೆ ಮಿನುಗುವಂತೆ
ಮನಸು ಹೊಸ ಹಾಡನು ಗುನುಗುತಿದೆ
ನೀ ನುಡಿಯುತಿರಲು ಸ್ವಾತಿಮುತ್ತಂತೆ
ಕನಸೂ ಕೂಡ ನಿನ್ನ ಸನಿಹವೇ ಬಯಸಿದೆ
ಜಗದ ಎಲ್ಲಾ ಖುಷಿಯ ನಿನಗೆ ನೀಡಿ
ಹೆಜ್ಜೆ ಹಾಕುತಿರಲು ನಿನ್ನ ಜೊತೆಗೂಡಿ
ದೇವರಲಿ ಕೇಳುವೆನು ಕೈಮುಗಿದು ಬೇಡಿ
ಇರುವಂತೆ ಮಾಡು ನಾವೆಂದೂ ಹೀಗೆ ಕೂಡಿ

Saturday 2 January 2016

ಸಂಗಮ

ರವಿ ಮುಳುಗುವ ತಿಳಿಗಾಳಿಯ ಸಮಯ
ಸವಿಸಂಜೆಗೆ ತಲೆದೂಗಿತು ಹೃದಯ
ಬಾನಲಿ ನಲಿಯುತ ಹಾರುವ ಹಕ್ಕಿಗಳ ನೋಡಿ
ಮನಸು ಗರಿಬಿಚ್ಚಿ ಕುಣಿಯಿತು ಅವುಗಳ ಕೂಡಿ
ಸಾಗರದ ಅಲೆಗಳು ಸ್ಪರ್ಶಿಸುತಿರಲು ಪಾದವ
ಕಾಣದೊಂದು ಶಕ್ತಿ ತನ್ನೆಡೆ ಸೆಳೆದಂತ ಅನುಭವ
ಪ್ರತಿ ಬೇಟಿಯಲು ತೀರದ ಹಳೆ ನೆನಪು ಅಳಿಸುವ ಅಲೆ
ನನಗೂ ಕಲಿಸಿಕೊಡಬಾರದೇಕೆ ಈ ನಿನ್ನ ವಿನೂತನ ಕಲೆ
ದೂರ ತೀರದಲಿ ಬಾನು ಕಡಲುಗಳ ಸಂಗಮ
ನೇರ ಹೃದಯವ ತಟ್ಟಿತು ಮಧುರ ಪ್ರೇಮ
ದೇವರ ಸುಂದರ ಸೃಷ್ಟಿಗೆ ಸೋತು ಮನ
ಸೃಷ್ಟಿಕರ್ತನಿಗೆ ಹೇಳಿತು ಸಾವಿರ ನಮನ
ಒಂಟಿ ಹೃದಯವು ನಿಸರ್ಗದ ಸಿರಿಗೆ ಸೋತು
ಜಂಟಿಯಾಗ ಬಯಸಿದೆ ಪ್ರಕೃತಿಯಲಿ ಬೆರೆತು
ಏಕಾಂಗಿ ಮನವು ಜೊತೆಗಾಗಿ ಪ್ರೀತಿಯೊಂದ ಕೇಳಲು
ಎಚ್ಚೆತ್ತುಕೊಂಡಿತು ಮನ ಮತ್ತೊಂದು ಅಲೆ ಬಂದು ತಟ್ಟಲು